ಮಂಗಳೂರು: ಕರಾವಳಿ ಕರ್ನಾಟಕಕ್ಕೆ ಪ್ರತ್ಯೇಕ ಮರಳು ನೀತಿ ಜಾರಿಗೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ.
ಸೋಮವಾರ ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ನೇತೃತ್ವ ದಲ್ಲಿ ಭೇಟಿ ಮಾಡಿದ ಜಿಲ್ಲೆಯ ಮುಖಂಡರ ನಿಯೋಗದ ಜತೆ ಸಭೆ ನಡೆಸಿದ ಮುಖ್ಯಮಂತ್ರಿ ಯವರು ಕರಾವಳಿಯಲ್ಲಿ ಪ್ರತ್ಯೇಕ ಮರಳು ನೀತಿ ಜಾರಿಗೆ ತರಬೇಕೆಂಬ ಜಿಲ್ಲೆಯ ಮುಖಂಡರ ಬೇಡಿ ಕೆಯ ಬಗ್ಗೆ ಚರ್ಚೆ ನಡೆಸಿ, ಶೀಘ್ರವೇ ನೀತಿ ಜಾರಿಗೆ ತರಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕರಾವಳಿಯಲ್ಲಿ ಮರಳು ಎತ್ತುವುದು ಮತ್ತು ಪೂರೈಕೆಯ ಸಮಸ್ಯೆಗಳು ಪದೇ ಪದೇ ಮರುಕಳಿಸುತ್ತಿವೆ. ಸಾರ್ವಜನಿಕರಿಂದಲೂ ಈ ಬಗ್ಗೆ ಒತ್ತಡಗಳು ಬರುತ್ತಿವೆ. ರಾಜ್ಯದ ಉಳಿದ ಜಿಲ್ಲೆಗಳಿಗೂ ಕರಾವಳಿಗೂ ಮರಳುಗಾರಿಕೆಯಲ್ಲಿ ವ್ಯತ್ಯಾಸವಿದೆ. ಈ ನಿಟ್ಟಿನಲ್ಲಿ ಕರಾವಳಿಗೆ ಪ್ರತ್ಯೇಕ ಮರಳು ನೀತಿ ಜಾರಿಗೆ ತರುವುದೇ ಇದಕ್ಕೆ ಶಾಶ್ವತ ಪರಿಹಾರ ಎಂದು ಸಚಿವ ರಮಾನಾಥ ರೈ ಅವರು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದರು.
ಇದಕ್ಕೆ ಸಹಮತ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಸಾರ್ವಜನಿಕರಿಗೆ ಮರಳು ದೊರಕುವಲ್ಲಿ ಯಾವುದೇ ಸಮಸ್ಯೆಗಳುಂಟಾಗಬಾರದು. ವಿಶೇಷ ವಾಗಿ ರಾಜ್ಯ ಸರಕಾರವು ಪ್ರತಿಯೊಬ್ಬರಿಗೂ ಮನೆ ಒದಗಿಸುವ ವಸತಿ ಯೋಜನೆಯನ್ನು ಹೆಚ್ಚಿನ ಸಂಖ್ಯೆ ಯಲ್ಲಿ ಕೈಗೆತ್ತಿಕೊಂಡಿದೆ. ಎಲ್ಲರ ಅಭಿಪ್ರಾಯ ಕ್ರೋಡೀಕರಿಸಿ ಕರಾವಳಿಗೆ ಪ್ರತ್ಯೇಕ ಮರಳು ನೀತಿ ತರಲು ಕಾರ್ಯೋನ್ಮುಖರಾಗುವುದಾಗಿ ತಿಳಿಸಿದರು.
ಪಶ್ಚಿಮವಾಹಿನಿ ಅನುಷ್ಠಾನಕ್ಕೆ ಮನವಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳನ್ನು ವೈಜ್ಞಾನಿಕವಾಗಿ ಕೈಗೆತ್ತಿಕೊಳ್ಳಲು ಮತ್ತು ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಪಶ್ಚಿಮ ವಾಹಿನಿ ಯೋಜನೆಯನ್ನು ಮುಂದಿನ ಬಜೆಟ್‌ನಲ್ಲಿ ಕೈಗೆತ್ತಿಕೊಳ್ಳಬೇಕು. 9/11 ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಬೇಕು. ಪುತ್ತೂರು ತಾಲೂಕಿನಲ್ಲಿಯೂ ಮಳೆ ಕಡಿಮೆಯಾಗಿ ಬರ ಆವರಿಸಿರುವುದರಿಂದ, ಬೋರ್‌ವೆಲ್ ಕೊರೆಯಲು ಅನುಮತಿ ನೀಡಬೇಕು ಎಂದು ಮುಖಂಡರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಈ ಬಗ್ಗೆ ಸಕಾರಾತ್ಮಕವಾಗಿ ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಿಯೋಗದಲ್ಲಿ ದ.ಕ. ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಶಾಹುಲ್ ಹಮೀದ್, ಶೇಖರ ಕುಕ್ಕೇಡಿ, ಪಿ.ಪಿ. ವರ್ಗೀಸ್, ಧರಣೇಂದ್ರ ಕುಮಾರ್, ಬಂಟ್ವಾಳ ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಪಕ್ಷದ ಮುಖಂಡರಾದ ಕಣಚೂರು ಮೋನು, ಪೃಥ್ವಿರಾಜ್, ಹರೀಶ್ ಕುಮಾರ್, ಡಾ| ರಘು, ಪಿಯೂಸ್ ರೊಡ್ರಿಗಸ್, ಸುರೇಶ್ ಕೋಟ್ಯಾನ್, ಆಸಿಫ್ ಮೂಲ್ಕಿ, ಇಕ್ಬಾಲ್ ಬೊಳ್ಳಾಯಿ, ಶ್ರೀನಿವಾಸ ಕಿಣಿ, ಕೆ.ಪಿ. ಥಾಮಸ್, ಅಶ್ರಫ್ ಗರಾಡಿ ಮತ್ತಿತರರು ಉಪಸ್ಥಿತರಿದ್ದರು ಎಂದು ಪ್ರಕಟನೆ ತಿಳಿಸಿದೆ.