ಬೆಂಗಳೂರು : ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಅದು ಮುಂದೆಯೂ ಮುಂದುವರಿಯಲಿದೆ . ಚುನಾವಣೆಗಾಗಿ ಈ ಹೋರಾಟ ಹುಟ್ಟಿಕೊಂಡಿಲ್ಲ ಎಂದು ಬೇಲಿಮಠದ ಶಿವರುದ್ರ ಸ್ವಾಮೀಜಿ ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವು ತಿಂಗಳಿಂದ ವೀರಶೈವ-ಲಿಂಗಾಯತ ವಿಚಾರದಲ್ಲಿ ಗದ್ದಲ ಎದ್ದಿದ್ದಕ್ಕೆ ಚುನಾವಣೆಗಾಗಿ ಎಂದು ಬಿಂಬಿಸಲಾಗಿತ್ತು. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಿನ್ನೆ ಮೊನ್ನೆ ಹುಟ್ಟಿದ್ದಲ್ಲ. ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿರುವ ಚಳುವಳಿ ಇದು. ಅದಕ್ಕೆ ಬೇಕಾದ ದಾಖಲೆಗಳು ನಮ್ಮ ಬಳಿ ಇವೆ ಎಂದು ತಿಳಿಸಿದರು.
ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಸೋಲಿಸುವ ತಂತ್ರ ಮಾಡಿದವರು ವೀರಶೈವರೇ ಹೊರತು ಲಿಂಗಾಯತರಲ್ಲ. ಸಚಿವ ಡಿ.ಕೆ.ಶಿವಕುಮಾರ ಅವರು ಧರ್ಮವನ್ನು ರಾಜಕೀಯದಲ್ಲಿ ಬೆರೆಸಬಾರದು ಎಂದು ಹೇಳಿಕೆ ನೀಡಿ, ಅವರೇ ಆ ಕೆಲಸ ಮಾಡುತ್ತಿದ್ದಾರೆ. ಧರ್ಮವನ್ನು ರಾಜಕೀಯದಲ್ಲಿ ಬೆರೆಸಿದವರು ನಾವಲ್ಲ ಎಂದರು.
ನಮ್ಮದು ಪ್ರತ್ಯೇಕ ಧರ್ಮದ ಹೋರಾಟ. ರಾಜಕಾರಣಿಗಳು ಈ ಧರ್ಮವನ್ನು ರಾಜಕೀಕರಣಗೊಳಿಸದೇ ದೂರ ಇರುವುದು ಒಳ್ಳೆಯದು. ತೋಂಟದಾರ್ಯ ಶ್ರೀಗಳು ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಕಂಡಿರುವ ಕನಸುಗಳನ್ನು ನಾವು ನನಸು ಮಾಡಲು ಯೋಜನೆ, ಹೋರಾಟ ರೂಪಿಸಿದ್ದೇವೆ. ಅದನ್ನು ಅತಿ ಶೀಘ್ರದಲ್ಲೇ ಬಹಿರಂಗಪಡಿಸಲಿದ್ದೇವೆ. ನಮ್ಮ ಹೋರಾಟ ಮುಂದುವರಿಯುತ್ತದೆ. ಹಿಂದು ಧರ್ಮವಲ್ಲ ಅದೊಂದು ಜೀವನ ಕ್ರಮ ಎಂದರು.
ಲಿಂಗಾಯತ ಪಂಚಮಸಾಲಿ ಮಠದ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರಿದ್ದ ಸಚಿವ ಸಂಪುಟದಲ್ಲೇ ಪ್ರತ್ಯೇಕ ಲಿಂಗಾಯತ ಧರ್ಮದ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಅಂದು ಯಾವುದೋ ಸಮುದಾಯವನ್ನು ಒಲೈಸಲು ಮತ್ತು ಇಂದು ಇನ್ನೊಂದು ಸಮುದಾಯವನ್ನು ತೃಪ್ತಿ ಪಡಿಸಲು ಹೀಗೆ ಮಾಡುತ್ತಿದ್ದಾರೆ ಎಂದು ದೂರಿದರು.