Advertisement
ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅಲ್ಪವಿರಾಮ ಪಡೆದುಕೊಂಡಿತ್ತಾದರೂ, ಇದೀಗ ಮತ್ತೂಂದು ಸುತ್ತಿನ ಹೋರಾಟಕ್ಕೆ ವೇದಿಕೆ ಸಜ್ಜುಗೊಳಿಸಲು ಲಿಂಗಾಯತ ನಾಯಕರು ಮುಂದಾಗಿದ್ದಾರೆ. ಪ್ರತ್ಯೇಕ ಧರ್ಮ ಹೋರಾಟದಲ್ಲಿ ತೊಡಗಿದ ನಾಯಕರಲ್ಲಿ ಕೆಲವರು ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರೆ, ಇನ್ನು ಕೆಲವರು ಗೆದ್ದರೂ ಸಚಿವ ಸಂಪುಟದಿಂದ ಹೊರಗುಳಿಯುವಂತಾಗಿದೆ. ಹೋರಾಟವನ್ನು ಮತ್ತೆ ಚುರುಕುಗೊಳಿಸುವ ನಿಟ್ಟಿನಲ್ಲಿ ನಾಯಕರು ಮಹತ್ವದ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
Related Articles
Advertisement
ಸೋಮವಾರ ಮಹತ್ವದ ನಿರ್ಣಯ?: ಪ್ರತ್ಯೇಕ ಧರ್ಮದ ಹೋರಾಟವನ್ನು ಮತ್ತೆ ತೀವ್ರಗೊಳಿಸುವ ನಿಟ್ಟಿನಲ್ಲಿ ಎಂ.ಬಿ. ಪಾಟೀಲ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸೋಮವಾರ ಮಹತ್ವದ ಸಭೆ ನಡೆಯಲಿದೆ ಎನ್ನಲಾಗಿದೆ. ಮುಂದಿನ ಹೋರಾಟದ ಸ್ವರೂಪ ಏನಾಗಿರಬೇಕು, ಬೇಡಿಕೆ ಈಡೇರುವವರೆಗೆ ಯಾವ ರೀತಿಯ ಒತ್ತಡವನ್ನು ಸರ್ಕಾರಗಳ ಮೇಲೆ ತರಬೇಕು ಎಂಬುದರ ಬಗ್ಗೆ ಚರ್ಚೆ ನಡೆದು ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಸುಪ್ರೀಂ ಮೊರೆ: ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನ ನೀಡಿಕೆ ನಿಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಶಿಫಾರಸು ಮಾಡಿದ್ದು, ಕೇಂದ್ರದ ಮೇಲೆ ಒತ್ತಡ ತರುವ ಜತೆಗೆ ಸೂಕ್ತ ಸ್ಪಂದನೆ ದೊರೆಯದಿದ್ದರೆ ಕಾನೂನು ಸಮರಕ್ಕೂ ಮುಂದಾಗಲು ಲಿಂಗಾಯತ ನಾಯಕರು ಮುಂದಾಗಿದ್ದಾರೆ. ಕೇಂದ್ರ ಸರ್ಕಾರಕ್ಕೆ ಈಗಾಗಲೇ ಅಲ್ಪಸಂಖ್ಯಾತ ಧರ್ಮ ಸ್ಥಾನದ ಶಿಫಾರಸು ಹೋಗಿದ್ದು, ಕೇಂದ್ರ ಅದಕ್ಕೆ ಅನುಮೋದನೆ ನೀಡಬೇಕು, ಇಲ್ಲವೆ ತಿರಸ್ಕರಿಸಬೇಕು. ಅದು ಬಿಟ್ಟು ಮತ್ತೂಮ್ಮೆ ಶಿಫಾರಸು ಮಾಡಿ ಎಂದು ಹೇಳುವುದನ್ನು ಸಹಿಸಲಾಗದು. ಇದೇ ಸ್ಥಿತಿ ಮುಂದುವರಿದರೆ ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಇದು ಕೇವಲ ವಿಧಾನಸಭಾ ಚುನಾವಣೆಗಾಗಿ ಮಾತ್ರ ಕೈಗೊಳ್ಳುವ ಹೋರಾಟವಲ್ಲ ಎಂಬುದನ್ನು ನಾವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ನಮ್ಮ ಹೋರಾಟ ಯಾವುದೇ ಪಕ್ಷದ ಪರ ಅಥವಾ ವಿರುದ್ಧ ಅಲ್ಲ. ರಾಜಕೀಯಕ್ಕೂ ಹೋರಾಟಕ್ಕೂ ಸಂಬಂಧವಿಲ್ಲ. ಲಿಂಗಾಯತ ಸಮಾಜಕ್ಕೆ ಸೌಲಭ್ಯ ದೊರೆಯಬೇಕು, ಬಸವ ತತ್ವ ಮೊಳಗಬೇಕು ಎಂಬುದಾಗಿದೆ.– ಬಸವರಾಜ ಹೊರಟ್ಟಿ, ಅಧ್ಯಕ್ಷ, ಜಾಗತಿಕ ಲಿಂಗಾಯತ ಮಹಾ ಪರಿಷತ್ ರಾಜಕೀಯ ಪ್ರಾತಿನಿಧ್ಯ: ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ
ಬೆಂಗಳೂರು: ಚುನಾವಣೆಗೂ ಮೊದಲು ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಹೋರಾಟ ನಡೆಸಿದ್ದ ವೀರಶೈವ ಲಿಂಗಾಯತರು ಈಗ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಒಡೆದ ಮನಸ್ಸುಗಳನ್ನು ಒಗ್ಗೂಡಿಸಿ ಒಂದಾಗಿ ಹೋರಾಟ ನಡೆಸಲು ಚಿಂತನೆ ನಡೆಸಿದ್ದಾರೆ. ಈ ಕುರಿತು ಶುಕ್ರವಾರ ಎರಡೂ ಕಡೆಯ ನಾಯಕರ ನಡುವೆ ಔಪಚಾರಿಕ ಮಾತುಕತೆ ನಡೆದಿದ್ದು, ಸಮಾಜದ ಒಗ್ಗಟ್ಟು ಪ್ರದರ್ಶಿಸಿ ರಾಜಕೀಯ ಪ್ರಾತಿನಿಧ್ಯ ಪಡೆಯಲು ಮುಂದಾಗಿದ್ದಾರೆಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಅಖೀಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರೊಂದಿಗೆ ಜಾಗತಿಕ ಲಿಂಗಾಯತ ಮಹಾ ಸಭೆ ರಾಜ್ಯಾಧ್ಯಕ್ಷ ಡಾ. ಶರಣ ಪ್ರಕಾಶ್ ಪಾಟೀಲ್ ಮಾತುಕತೆ ನಡೆಸಿದ್ದು ಎರಡೂ ಬಣಗಳ ನಾಯಕರು ಜೂನ್ 13 ಅಥವಾ 14 ರಂದು ಸಭೆ ಸೇರಿ ಮುಂದಿನ ಹೋರಾಟಗಳ ಕುರಿತು ಚರ್ಚಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. – ಅಮರೇಗೌಡ ಗೋನವಾರ