ಬೆಂಗಳೂರು: ಪ್ರತ್ಯೇಕ ಧರ್ಮ ಸಂಬಂಧ ಸೋನಿಯಾಗಾಂಧಿಯವರಿಗೆ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಬರೆದಿದ್ದಾರೆ ಎನ್ನಲಾದ ಪತ್ರ ಅಸಲಿಯೋ- ನಕಲಿಯೋ ಎಂಬುದನ್ನು ಪತ್ತೆ ಹಚ್ಚಬೇಕು. ಈ ಪತ್ರವನ್ನು ಕಾಂಗ್ರೆಸ್ ಕಾರ್ಯಕರ್ತರೋ, ಜೆಡಿಎಸ್‌ನವರು ಇಲ್ಲವೇ ಎಂ.ಬಿ.ಪಾಟೀಲರ ವಿರೋಧಿಗಳೇ ಬಿಡುಗಡೆ ಮಾಡಿದ್ದಾರೋ ಎಂಬುದನ್ನು ಮೊದಲು ಪತ್ತೆ ಹಚ್ಚಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.
ಈ ಪ್ರಕರಣ ಸಂಬಂಧ ಪೊಲೀಸ್ ವಶದಲ್ಲಿದ್ದ ಪತ್ರಕರ್ತ ಹೇಮಂತ್ ಕುಮಾರ್ ಅವರನ್ನು ಸಿಐಡಿ ಕಚೇರಿಯಲ್ಲಿ ಮಂಗಳವಾರ ಭೇಟಿಯಾದ ಬಳಿಕ ಪ್ರತಿಕ್ರಿಯಿಸಿದ ಅವರು, ಪತ್ರಕರ್ತ ಹೇಮಂತ್ ಕುಮಾರ್ ಅವರು ಬಿಜೆಪಿಯ ಹಳೆಯ ಕಾರ್ಯಕರ್ತರಾಗಿದ್ದು, ಪೊಲೀಸರು ವಿನಾಕಾರಣ ಬಂಧಿಸಿದ್ದಾರೆ. ಕಳೆದ ವರ್ಷ ಬರೆಯಲಾಗಿದೆ ಎನ್ನಲಾದ ಪತ್ರಕ್ಕೆ ಸಂಬಂಧಪಟ್ಟಂತೆ ಬಂಧಿಸಿದ್ದಾರೆ.
ಪತ್ರ ಅವರು ಬರೆದಿದ್ದಲ್ಲ, ಪತ್ರಕ್ಕೂ ಅವರಿಗೂ ಸಂಬಂಧವಿಲ್ಲ. ಯಾರೋ ರವಾನಿಸಿದ ಪತ್ರವನ್ನು ಬೇರೆಯವರಿಗೆ ಕಳುಹಿಸಿದ ಕಾರಣಕ್ಕೆ ಬಂಧಿಸಿರುವುದು ಖಂಡನೀಯ ಎಂದು ದೂರಿದರು. ಎಂ.ಬಿ.ಪಾಟೀಲ್ ಅವರು ಗೃಹ ಸಚಿವರಾದ ಬಳಿಕ ಬಿಜೆಪಿ ಕಾರ್ಯಕರ್ತರ ಮೇಲೆ ವಿನಾಕಾರಣ ಆರೋಪ ಹೊರಿಸುವುದು, ಪ್ರಕರಣ ದಾಖಲಿಸುವುದು ಹೆಚ್ಚಾಗಿದೆ.
ಲಿಂಗಾಯಿತ- ವೀರಶೈವ ಧರ್ಮ ಒಡೆಯಲು ಶತ ಪ್ರಯತ್ನ ಮಾಡಿದವರು ಎಂ.ಬಿ.ಪಾಟೀಲ್ ಅವರು ತಾನು ಮಾಡಿದ ತಪ್ಪನ್ನು ಇನ್ನೊಬ್ಬರ ಮೇಲೆ ಹೊರಿಸುವ ಯತ್ನ ಮಾಡಿದ್ದಾರೆ. ರಾಜ್ಯ ಪೊಲೀಸರು ಸರ್ಕಾರದ ಪ್ರತಿನಿಧಿಗಳಂತೆ, ಕಾಂಗ್ರೆಸ್ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ. ಹೇಮಂತ್ ಕುಮಾರ್ ಅವರನ್ನು ಭೇಟಿಯಾಗಲು ಬಿಜೆಪಿ ಕಾರ್ಯಕರ್ತರಿಗೆ ಅವಕಾಶ ನೀಡಬೇಕು. ಹೇಮಂತ್ ಕುಮಾರ್ ನಿರಪರಾಧಿ. ಆದರೆ ಸಿಐಡಿಯ ಯಾವುದೇ ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲ ಎಂದು ಹೇಳಿದರು.
ಈ ಪತ್ರವನ್ನು ವಿಜಯಪುರದಲ್ಲಿ ವೈರಲ್ ಮಾಡಿದವರು ಯಾರು ಎಂಬುದನ್ನು ಪತ್ತೆ ಹಚ್ಚಬೇಕು. ಪತ್ರವನ್ನು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟವರು, ಕಾರಣಕರ್ತರು ಯಾರು ಎಂಬುದನ್ನು ಪತ್ತೆ ಹಚ್ಚಲಿ. ತಮ್ಮ ನಿಂತ ನೆಲದಲ್ಲಾದ ಹುಳಕನ್ನು ಮುಚ್ಚಿ ಹಾಕಲು ಬೆಂಗಳೂರಿನ ಕಾರ್ಯಕರ್ತರ ಮೇಲೆ ಸೇಡು ತೀರಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಈ ಪತ್ರವನ್ನು ಎಂ.ಬಿ.ಪಾಟೀಲ್ ಅವರೇ ಬರೆದಿದ್ದಾರೆಯೇ ಎಂಬ ಸಂಶಯವಿದೆ. ಏಕೆಂದರೆ ಅವರ ಸಹಿಗೂ ಪತ್ರದಲ್ಲಿರುವ ಸಹಿಗೂ ತಾಳೆಯಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಕಾಂಗ್ರೆಸ್ ಕುರ್ಚಿ ಆಸೆಗೆ ಧರ್ಮ, ಜಾತಿ ಒಡೆಯುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದು, ಇದನ್ನು ಬಿಜೆಪಿ ನಿರಂತರವಾಗಿ ವಿರೋಧಿಸುತ್ತಾ ಬಂದಿದೆ ಎಂದು ಹೇಳಿದರು.