ಕೋಲಾರ: ಸರ್ಕಾರದ ಕಾರ್ಯಕ್ರಮಗಳನ್ನು ಧರ್ಮದ ಅಡಿಯಾಳಾಗಿಸದಿರುವುದೇ ನಿಜವಾದ ಜಾತ್ಯತೀತ ವ್ಯವಸ್ಥೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಡಾ.ಎಲ್.ಬಸವರಾಜು ಪ್ರತಿಷ್ಠಾನದಿಂದ ಆಯೋಜಿಸಿದ್ದ ಡಾ.ಎಲ್.ಬಸವರಾಜು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ, ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಜಾತ್ಯತೀತ ಎಂದರೆ ಸರ್ವ ಧರ್ಮಗಳನ್ನು ಸಮನಾಗಿ ಕಾಣುವುದು ಎಂದಲ್ಲ. ಧರ್ಮವನ್ನು ರಾಜಕಾರಣದಿಂದ ಬೇರ್ಪಡಿಸುವ ಸಾಮಾಜಿಕ ವ್ಯವಸ್ಥೆಯೇ ಜಾತ್ಯ ತೀತ ಎಂದು ಅಭಿಪ್ರಾಯಪಟ್ಟರು.
ಜಾತ್ಯತೀತ ಎಂದರೆ ಎಲ್ಲ ಧರ್ಮಗಳನ್ನು ಸಮನಾಗಿ ಕಾಣುವುದೇ ಜಾತ್ಯತೀತ ಎನ್ನಲಾಗುತ್ತದೆ. ಅದು ತಪ್ಪು. ಸರ್ಕಾರದ ಕಾರ್ಯಕ್ರಮಗಳು ಧರ್ಮದ ಅಡಿಯಾಳಾಗಿಸದಿರುವುದೇ ನಿಜವಾದ ಜಾತ್ಯತೀತ ವ್ಯವಸ್ಥೆ, ಎಲ್ಲ ಪಾಲಿಸಿಗಳು ಜನಹಿತವಾಗಿರಬೇಕು, ಅದುವೇ ನಿಜವಾದ ಪ್ರಜಾಪ್ರಭುತ್ವ, ಈ ನಿಟ್ಟಿನಲ್ಲಿ ಎಂದೂ ಚರ್ಚೆಯೇ ಆಗಿಲ್ಲ ಎಂದು ನುಡಿದರು. ಅಂಬೇಡ್ಕರ್ ಎಂದರೆ ಮೀಸಲಾತಿ ಅಲ್ಲ, ಅಂಬೇಡ್ಕರ್ ಅವರನ್ನು ಮೀಸಲಾತಿಗೆ ಸೀಮಿತಗೊಳಿಸಿರುವುದು ಅಸಹ್ಯ ಹುಟ್ಟಿಸುತ್ತಿದೆ. ಮೀಸಲಾತಿ ಸಾಮಾಜಿಕ ನ್ಯಾಯದ ಸಣ್ಣ ಅಣು ಅಷ್ಟೇ. ಶ್ರಮಕ್ಕೆ ಸರಿಯಾಗಿ ಪ್ರತಿಫಲ ನೀಡುವುದೇ ಸಾಮಾಜಿಕ ನ್ಯಾಯ. ಉತ್ಪಾದನೆ ಆಗುವ ಸಂಪತ್ತು ಶ್ರಮಿಕರಿಗೆ ಸಿಗದೆ ಪರರ ಪಾಲಾಗುತ್ತಿರುವುದರಿಂದಲೇ ಬಡತನ, ನಿರುದ್ಯೋಗಕ್ಕೆ ಕಾರಣವಾಗುತ್ತಿದೆ ಎಂದರು.
ಬಾಲ್ಯದಿಂದಲೇ ಬಡತನ, ಕಷ್ಟಗಳನ್ನು ಅನುಭವಿಸಿಕೊಂಡು ಬೆಳೆದ ವಿ.ಗೀತಾ ಎರಪಂಥೀಯ ಹೋರಾಟಗಳ ಮೂಲಕ ರಾಜ್ಯ ಮಟ್ಟಕ್ಕೆ ಬೆಳೆದಿದ್ದಾರೆ. ಹೋರಾಟಗಾರ್ತಿಯನ್ನು ಗುರುತಿಸಿರುವುದು ಜಾತ್ಯತೀತ ಶಕ್ತಿಗೆ ನೀಡಿದ ಗೌರವ ಎಂದು ನುಡಿದರು.
ಚಿಂತಕ ಲಕ್ಷ್ಮೀಪತಿ ಕೋಲಾರ, ಭಾರತವನ್ನು ತಾಯಿನಾಡು, ಮಾತೃಭೂಮಿ ಎಂದು ಉನ್ಮಾದದಲ್ಲಿ ಬಣ್ಣೀಸಲಾಗುತ್ತುದೆಯೇ ವಿನಃ ತಾಯಿಯ ಹೆಸರಿಟ್ಟಿಲ್ಲ, ಭರತ ಎನ್ನುವ ಪುರುಷನ ಹೆಸರಿನಿಂದ ಕರೆಯಲ್ಪಡುತ್ತಿರುವುದು ವೈರುಧ್ಯ ಹಾಗೂ ವ್ಯಂಗ್ಯವೂ ಹೌದು ಎಂದರು. ಸನ್ಮಾನ ಸ್ವೀಕರಿಸಿದ ವಿ.ಗೀತಾ, ದಲಿತ ಮತ್ತು ಕಮ್ಯನಿಸ್ಟ್ ಚಳವಳಿಗಳು ಇನ್ನು ಇಂದಿಗೂ ಚಳವಳಿಯಾಗಿಯೇ ಉಳಿಯಲು ಕಾರಣವಾಗಿದೆ. ನನ್ನನ್ನು ಪೋಷಣೆ ಮಾಡಿದ್ದು, ಬೆಳೆಸಿದ್ದು ಕೂಡ ಚಳವಳಿಯ ನಾಯಕರೇ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಲಕ್ಷ್ಮೀನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪುರುಷೋತ್ತಮರಾವ್, ವಿಮರ್ಶಕ ಡಾ.ಚಂದ್ರಶೇಖರ ನಂಗಲಿ, ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್ ಇತರರಿದ್ದರು.