Advertisement

ಪ್ರತ್ಯೇಕ ಧರ್ಮ ಪತ್ರ ವಿವಾದ: ಶಾರದಾ ಡೈಮಂಡ್‌ ವಿರುದ್ಧ ದೂರು

11:37 PM Apr 29, 2019 | Lakshmi GovindaRaju |

ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ಕುರಿತು ಗೃಹ ಸಚಿವ ಎಂ.ಬಿ.ಪಾಟೀಲ್‌ ಅವರು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿಗೆ ಬರೆದಿದ್ದರು ಎನ್ನಲಾದ ನಕಲಿ ಪತ್ರವನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ ಆರೋಪದ ಮೇಲೆ ಶಾರದಾ ಡೈಮಂಡ್‌ ಎಂಬ ಮಹಿಳೆ ವಿರುದ್ಧ ಜೆ.ಶರವಣನ್‌ ಎಂಬುವರು ಶ್ರೀರಾಮಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿತ ಮಹಿಳೆ ಶಾರದಾ ಡೈಮಂಡ್‌ ತಲೆಮರೆಸಿಕೊಂಡಿದ್ದು, ಆಕೆಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

Advertisement

ದೂರಿನಲ್ಲಿ ಏನಿದೆ?: ಏ.25ರಂದೇ ಪ್ರಕರಣ ದಾಖಲಿಸಿರುವ ಶರವಣನ್‌ ಅವರು, ಶಾರದಾ ಡೈಮಂಡ್‌ ಅವರು ಏ.16ರಂದು ಗೃಹ ಸಚಿವ ಎಂ.ಬಿ.ಪಾಟೀಲ್‌ ಅವರ ತೇಜೋವಧೆ ಮಾಡುವ ಉದ್ದೇಶದಿಂದ ಬಿಎಲ್‌ಡಿಇ ಶಿಕ್ಷಣ ಸಂಸ್ಥೆಯ ನಕಲಿ ಲೆಟರ್‌ ಹೆಡ್‌ ಮತ್ತು ಸಚಿವರ ನಕಲಿ ಸಹಿ ಮಾಡಿರುವ ಪತ್ರವನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪ್ರಕಟಿಸಿದ್ದಾರೆ.

ಅಲ್ಲದೆ, “ಧರ್ಮ ಒಡೆದರೆ ರಾಜಕೀಯವಾಗಿ ಲಾಭಕರ ಅಂತ ಸೋನಿಯಾ ಗಾಂಧಿಗೆ ಎಂ.ಬಿ.ಪಾಟೀಲ್‌ ಪತ್ರ ಬರೆದಿದ್ದ’. ಗ್ಲೋಬಲ್‌ ಕ್ರಿಶ್ಚಿಯನ್‌ ಅಸೋಸಿಯೇಷನ್‌ ಮತ್ತು ಮುಸ್ಲಿಂ ಅಸೋಸಿಯೇಷನ್‌ ಪ್ರತಿನಿಧಿಗಳೊಂದಿಗೆ ಪಾಟೀಲನ ಚುನಾವಣೆ ಕಾರ್ಯತಂತ್ರ ಅಂತೆ! ಇದು ಏನನ್ನು ಸೂಚಿಸುತ್ತದೆ ಅಂತಾ ಪ್ರತಿಯೊಬ್ಬ ಹಿಂದೂ ಕೂಡ ಯೋಜನೆ ಮಾಡಬೇಕು. ಇನ್ನೆಷ್ಟು ಹಿಡನ್‌ ಅಜೆಂಡಾಗಳಿದ್ಯೋ ಇವರುಗಳದ್ದು! “ಈ ಪತ್ರ ನಕಲಿ ಅಲ್ಲ ಅಸಲಿ’.

ರಾಷ್ಟ್ರವಾದಿ ಲಿಂಗಾಯತರು ಪಾಟೀಲರ ಕುತ್ತಿಗೆ ಪಟ್ಟಿ ಹಿಡಿದು ಪ್ರಶ್ನೆ ಮಾಡಬೇಕು. ರಾಜ್ಯದಲ್ಲಿರೋ ಪ್ರತಿಯೊಬ್ಬ ಲಿಂಗಾಯತರಿಗೂ ತಲುಪುವವರೆಗೂ ಈ ವಿಷಯ ಶೇರ್‌ ಆಗಬೇಕು. ಅಯೋಗ್ಯರು ಎಂದು ಬರೆದುಕೊಂಡಿದ್ದು, “ಲೋಕಸಭಾ ಚುನಾವಣೆ-2019′ ಹ್ಯಾಷ್‌ಟ್ಯಾಗ್‌ ಮಾಡಿದ್ದಾರೆ.

ಶಾರದಾ ಡೈಮಂಡ್‌ ಅವರು, ಸಚಿವ ಎಂ.ಬಿ.ಪಾಟೀಲರ ವಿರುದ್ಧ ಒಂದು ಸಮುದಾಯವನ್ನು ಎತ್ತಿಕಟ್ಟುವ ಮತ್ತು ಗಲಭೆಗೆ ಪ್ರಚೋದನೆ ನೀಡುವ ದುರುದ್ದೇಶದಿಂದ ಹೀಗೆ ಬರೆದಿದ್ದಾರೆ. ಗೃಹ ಸಚಿವರ ಸಹಿಯನ್ನು ನಕಲಿ ಮಾಡಿ ಸುಳ್ಳು ಸುದ್ದಿಯನ್ನು ಫೇಸ್‌ಬುಕ್‌ನಲ್ಲಿ ಬರೆದಿರುವ ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶರವಣನ್‌ ಮನವಿ ಮಾಡಿದ್ದಾರೆ.

Advertisement

ಎನ್‌ಸಿಆರ್‌: ಏ.17ರಂದೇ ಶರವಣನ್‌ ದೂರು ನೀಡಿದ್ದರು. ಆದರೆ, ಶ್ರೀರಾಮಪುರ ಪೊಲೀಸರು ಗಂಭೀರ ಸ್ವರೂಪವಲ್ಲದ ಪ್ರಕರಣ (ಎನ್‌ಸಿಆರ್‌) ಎಂದು ಪರಿಗಣಿಸಿ, ದೂರುದಾರರಿಗೆ ಸ್ವೀಕೃತಿ ಕೂಡ ನೀಡಿದ್ದರು. ಏ.25ರಂದು ಶರವಣನ್‌ ಮತ್ತೂಂದು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಪತ್ರಕರ್ತ ಹೇಮಂತ್‌ ಕುಮಾರ್‌ ವಿಚಾರಣೆ: ಈ ಮಧ್ಯೆ, ಸಿಐಡಿ ವಶದಲ್ಲಿರುವ ಹೇಮಂತ್‌ ಕುಮಾರ್‌ ಅವರನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದು, ಈ ಪತ್ರ ಹೇಗೆ ಬಂತು? ಯಾವ ಸೈಬರ್‌ ಸೆಂಟರ್‌ನಲ್ಲಿ ಸಿದ್ದಪಡಿಸಲಾಗಿದೆ? ಅಥವಾ ಯಾವುದಾದರು ರಾಜಕೀಯ ಪಕ್ಷದ ಕಚೇರಿಯಲ್ಲೇ ಸಿದ್ದಪಡಿಸಲಾಗಿದೆಯೇ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಐಡಿ ಐಜಿಪಿ ಹೇಮಂತ್‌ ನಿಂಬಾಳ್ಕರ್‌ ಅವರು ದೀರ್ಘ‌ ರಜೆ ಮೇಲೆ ತೆರಳಿರುವುದರಿಂದ ಸದ್ಯ ಡಿಐಜಿ ಟಿ.ಡಿ.ಪವಾರ್‌ ಅವರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next