ಹಟ್ಟಿಚಿನ್ನದಗಣಿ: ಸಾರ್ವಜನಿಕ ಪ್ರದೇಶದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ವೇಳೆ ಎರಡು ಪ್ರತ್ಯೇಕ ಕಡೆ ದಾಳಿ ನಡೆಸಿದ ಹಟ್ಟಿ ಠಾಣೆ ಪೊಲೀಸರು ಮೂವರನ್ನು ಬಂಧಿಸಿ, ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಟ್ಟಣದ ಸಂತೆ ಬಜಾರ್‌ದಲ್ಲಿ ಮಟ್ಕಾ ಬರೆಯುತ್ತಿದ್ದ ಆದಪ್ಪ ಯಂಕಪ್ಪ ಗುಡದನಾಳ(48) ಹಾಗೂ ನರಸಪ್ಪ ಶಿವರಾಜ (35) ಎಂಬಾತರನ್ನು ಸಿಪಿಐ ಪ್ರಕಾಶ ಮಾಳಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಬಂಧಿತರಿಂದ 1710 ರೂ. ನಗದು, ಜೂಜಾಟಕ್ಕೆ ಬಳಸಿದ ಚೀಟಿ, ಪೆನ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತರು ಮಟ್ಕಾ ಚೀಟಿ ಹಾಗೂ ಹಣವನ್ನು ಶಂಕರಗೌಡ ಮಲ್ಕೇಂದ್ರಗೌಡ ಬಳಗಾನೂರುಗೆ ನೀಡುತ್ತಿದ್ದರೆಂದು ವಿಚಾರಣೆ ವೇಳೆ ತಿಳಿಸಿದ್ದರಿಂದ ಶಂಕರಗೌಡ ಮಲ್ಕೇಂದ್ರಗೌಡ ಬಳಗಾನೂರು ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಟ್ಟಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಕೋಠಾ ಗ್ರಾಮ
ಕೋಠಾ ಗ್ರಾಮದ ವಾಲ್ಮೀಕಿ ಸರ್ಕಲ್ ಹತ್ತಿರ ಮಟ್ಕಾ ಬರೆಯುತ್ತಿದ್ದ ವ್ಯಕ್ತಿಯನ್ನು ಹಟ್ಟಿ ಠಾಣೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಕೋಠಾ ಗ್ರಾಮದ ನಿಂಗಪ್ಪ “ಶಾಸ್ತ್ರಿ ‘ ಕುಂಟಶಾಸ್ತ್ರಿ (39) ಬಂಧಿತನಾಗಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಬಂಧಿತನಿಂದ 1330 ರೂ. ನಗದು, ಮಟ್ಕಾ ಜೂಜಾಟಕ್ಕೆ ಬಳಸಿದ ಚೀಟಿ ಹಾಗೂ ಪೆನ್ ವಶಕ್ಕೆ ಪಡೆದಿದ್ದಾರೆ.
ಬಂಧಿತ ಮಟ್ಕಾ ಹಣ ಹಾಗೂ ಚೀಟಿಯನ್ನು ನಿಂಗಪ್ಪ ಚಂದಪ್ಪ ಮನಗೂಳಿಗೆ ನೀಡುತ್ತಿದ್ದನೆಂದು ವಿಚಾರಣೆ ವೇಳೆ ತಿಳಿಸಿದ್ದರಿಂದ ನಿಂಗಪ್ಪ ಚಂದಪ್ಪ ಮನಗೂಳಿ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.