Advertisement

ಆರೋಪಿಗಳ ಸೆರೆಗೆ ಪ್ರತ್ಯೇಕ ಪ್ರತಿಭಟನೆ

09:20 PM Jun 12, 2019 | Lakshmi GovindaRaj |

ಮೈಸೂರು: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ದಲಿತ ಯುವಕನೊಬ್ಬನನ್ನು ಥಳಿಸಿ ನಂತರ ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಬುಧವಾರ ನಗರದಲ್ಲಿ ಪ್ರತ್ಯೇಕ ಮೂರು ಪ್ರತಿಭಟನೆ ನಡೆದವು.

Advertisement

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ದಲಿತ ಸಂಘರ್ಷ ಸಮಿತಿ ಮೈಸೂರು ಜಿಲ್ಲಾ ಶಾಖೆ ಪದಾಧಿಕಾರಿಗಳು ಬೆತ್ತಲೆ ಮೆರವಣಿಗೆ ಮಾಡಿದವರ ವಿರುದ್ಧ ಧಿಕ್ಕಾರ ಕೂಗಿದರು.

ದಲಿತ ಯುವಕ ಪ್ರತಾಪ್‌ ದೇವಸ್ಥಾನ ಪ್ರವೇಶಿಸಿದ ಎಂಬ ಕಾರಣದಿಂದ ಆತನ ಮೇಲೆ ಕಳವು ಆರೋಪ ಹೊರಿಸಿ, ಬೆತ್ತಲೆ ಮೆರವಣಿಗೆ ಮಾಡಿರುವುದು ಖಂಡನೀಯ.

ಆತ ತಪ್ಪುಗಳನ್ನು ಮಾಡಿದ್ದರೆ ಕಾನೂನು ಕ್ರಮಕ್ಕೆ ಗುರಿಪಡಿಸಬೇಕು. ಅದುಬಿಟ್ಟು ಆತನನ್ನು ಬೆತ್ತಲೆಗೊಳಿಸಿ ಅಪಮಾನ ಮಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತರ ಮೇಲೆ ಪ್ರತಿನಿತ್ಯ ನಾನಾ ತರಹದ ದೌರ್ಜನ್ಯ ಪ್ರಕರಣಗಳು ನಡೆಯುತ್ತಲೇ ಇವೆ. ಎಷ್ಟೋ ಘಟನೆಗಳು ಹೊರಪ್ರಪಂಚಕ್ಕೆ ತಿಳಿಯದೆ ಮುಚ್ಚಿ ಹೋಗುತ್ತಿವೆ.

Advertisement

ಅಂತಹ ಒಂದು ಘಟನೆ ಚಾಮರಾಜನಗರ ಗುಂಡ್ಲುಪೇಟೆ ತಾಲೂಕಿನ ವೀರನಕಟ್ಟೆ ಗೇಟ್‌ ಬಳಿ ಸಂಭವಿಸಿದೆ. ಈ ಪ್ರಕರಣ ನಡೆದು ವಾರ ಕಳೆದರೂ ಪೊಲೀಸರಾಗಲಿ, ಜಿಲ್ಲಾಡಳಿತವಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕೋಶ ವ್ಯಕ್ತಪಡಿಸಿದರು.

ಇಂತಹ ಘಟನೆಗಳು ನಡೆದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೆ ಇರುವುದು ಆಡಳಿತ ವ್ಯವಸ್ಥೆಯ ದಲಿತ ವಿರೋಧಿ ಧೋರಣೆಯಾಗಿದೆ. ಹೀಗಾಗಿ ಕಾನೂನು ಸುವ್ಯವಸ್ಥೆ ಬಗ್ಗೆ ಯಾವ ಗೌರವ, ಕಾಳಜಿ ಇಲ್ಲದ ದೌರ್ಜನ್ಯ ಕೋರರ ಅಟ್ಟಹಾಸಗಳು ಮರುಕಳಿಸುತ್ತಲೇ ಇವೆ.

ಆದ್ದರಿಂದ ಈ ಘಟನೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾದ ಎಲ್ಲರನ್ನೂ ಬಂಧಿಸಬೇಕು. ಸಮಾಜದಲ್ಲಿ ಜಾತಿ, ಧರ್ಮ, ಲಿಂಗ ತಾರತಮ್ಯಗಳಿಂದ ನಡೆಯುವ ಇಂತಹ ಅಮಾನುಷ ಕೃತ್ಯಗಳನ್ನು ತಡೆಯಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ, ಪದಾಧಿಕಾರಿಗಳಾದ ಶಂಭುಲಿಂಗಸ್ವಾಮಿ, ರತ್ನಪುರಿ ಪುಟ್ಟಸ್ವಾಮಿ, ಹೆಗ್ಗನೂರು ನಿಂಗರಾಜು, ಕೆ.ಕೆ.ಜಗದೀಶ್‌, ಬಿ.ಡಿ.ಶಿವಬುದ್ಧಿ, ಯಡಕೊಳ ಮಹದೇವಸ್ವಾಮಿ, ಕುಪ್ಪೇಗಾಲ ಸೋಮು, ಮಂಜುನಾಥ್‌ ಕುಂಬಾರಕೊಪ್ಪಲು, ಎಸ್‌.ರಾಜಣ್ಣ ಇತರರು ಹಾಜರಿದ್ದರು.

ದಲಿತ ಸಂಘಟನೆಗಳ ಒಕ್ಕೂಟದಿಂದ ಧರಣಿ: ದಲಿತ ಯುವಕನೊಬ್ಬನನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಪುರಭವನದ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದರು.

ಈ ವೇಳೆ ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗುಂಡ್ಲುಪೇಟೆ ತಾಲೂಕಿನಲ್ಲಿ ದಲಿತ ಯುವಕನ ಮೇಲಿನ ಹಲ್ಲೆ ನಾಗರಿಕ ಸಮಾಜದ ತಲೆ ತಗ್ಗಿಸುವಂತಹ ಕೆಲಸವಾಗಿದೆ.

ಸಂವಿಧಾನ ಜಾರಿಯಾಗಿ 70ದಶಕಗಳೇ ಕಳೆದರೂ ದಲಿತ ಯುವಕನನ್ನು ಅಮಾನುಷವಾಗಿ ನಡೆಸಿಕೊಂಡಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇಂತಹ ಘಟನೆಗಳನ್ನು ತೀವ್ರವಾಗಿ ಖಂಡಿಸುತ್ತೇವೆ. ರಾಜಪಾಲರು ಮತ್ತು ರಾಷ್ಟ್ರಪತಿಗಳು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ದಲಿತ ಸಂಘಟನೆಗಳು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಿವೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹೇಶ್‌ಚಂದ್ರಗುರು ಸೇರಿದಂತೆ ಮತ್ತಿತರರು ಇದ್ದರು.

ತಾಪಂ ಆವರಣದಲ್ಲೂ ಪ್ರತಿಭಟನೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ವತಿಯಿಂದ ನಗರದ ತಾಪಂ ಕಚೇರಿ ಎದುರು ದಲಿತ ಯುವಕನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವ ಸಂಬಂಧ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಸಂಘಟನಾ ಸಂಚಾಲಕ ಕೆ. ನಂಜಪ್ಪ ಬಸವನಗುಡಿ ನೇತೃತ್ವದಲ್ಲಿ ಸೇರಿದ ಪ್ರತಿಭಟನಾಕಾರರು ಸದರಿ ಘಟನೆಯನ್ನು ತೀವ್ರವಾಗಿ ಖಂಡಿಸಿ, ಇಂತಹ ಕ್ರೂರ ಅಮಾನವೀಯ ಕೃತ್ಯಕ್ಕೆ ಕೈಜೋಡಿಸಿದವರ ವಿರುದ್ಧ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಯುವಕನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಭಾಗಿಯಾದವರಿಗೆ ತಕ್ಕ ಶಿಕ್ಷೆಯಾಗಬೇಕು. ಸರ್ಕಾರ ಕೂಡಲೇ ತಪ್ಪಿತಸ್ಥರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ವೆಂಕಟೇಶ್‌ ದಾಸ್‌, ಸಿ. ಮೋಹನ್‌ಕುಮಾರ್‌, ಆಟೋಸಿದ್ದು, ಮತ್ತಿರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next