Advertisement

ಕಲ್ಯಾಣದ ಪ್ರಗತಿಗಾಗಿ ಪ್ರತ್ಯೇಕ ಸಚಿವಾಲಯ

09:52 AM Sep 18, 2019 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕ’ದ ಆರು ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದ್ದಾರೆ.

Advertisement

ನಗರದ ಪೊಲೀಸ್‌ ಪೆರೇಡ್‌ ಮೈದಾನದಲ್ಲಿ “ಕಲ್ಯಾಣ ಕರ್ನಾಟಕ ಉತ್ಸವ’ ದಿನಾಚರಣೆ ನಿಮಿತ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕೇವಲ “ಕಲ್ಯಾಣ ಕರ್ನಾಟಕ’ ಎಂದು ಘೋಷಣೆ ಮಾಡಿದರೆ ಸಾಲದು. ಜತೆಗೆ ಅಭಿವೃದ್ಧಿ ಕಾರ್ಯ ಕೈಗೊಂಡಲ್ಲಿ ಅರ್ಥ ಬರುತ್ತದೆ. ಹೀಗಾಗಿ ಬರುವ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಈ ಭಾಗಕ್ಕೆ ಮೀಸಲಿಡುತ್ತೇನೆ ಎಂದರು.

ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿ ಸಾವಿರಾರು ಕೋಟಿ ರೂ. ಆಸ್ತಿ-ಪಾಸ್ತಿ ನಷ್ಟವಾಗಿರುವ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಹೆಚ್ಚಿನ ಹಣ ನೀಡಲಿಕ್ಕೆ ಆಗುವುದಿಲ್ಲ. ಒಟ್ಟಾರೆ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ತಮ್ಮ ಸರ್ಕಾರ ಬದ್ಧವಿದೆ ಎಂದರು.

ಗೊಂದಲ ನಿವಾರಣೆ:
ಸಂವಿಧಾನದ 371 (ಜೆ) ವಿಧಿ ಪರಿಣಾಮಕಾರಿ ಜಾರಿಗೆ ಒತ್ತು ಕೊಡಲಾಗುವುದು. ಪ್ರಮುಖವಾಗಿ ಬಡ್ತಿಯಲ್ಲಿನ ಸಮಸ್ಯೆ ನಿವಾರಿಸಲಾಗುವುದು. 371 (ಜೆ) ಅಭಿವೃದ್ಧಿ ಕೋಶದ ಆಡಳಿತ ಶಾಖೆ ಪ್ರಾದೇಶಿಕ ಕಚೇರಿಯನ್ನು ಬೆಂಗಳೂರಿನ ಜತೆಗೆ ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲೂ ಶಾಖೆ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಗುಲ್ಬರ್ಗ ವಿವಿಯಲ್ಲಿ ಕಲ್ಯಾಣ ಕರ್ನಾಟಕದ ಸಮಗ್ರ ಅಧ್ಯಯನ ಪೀಠ ಸ್ಥಾಪಿಸಲಾಗುವುದು. ಈ ಭಾಗದ ಕಲ್ಯಾಣ ಕರ್ನಾಟಕದ ಇತಿಹಾಸವನ್ನು ಪಠ್ಯದಲ್ಲಿ ಸೇರ್ಪಡೆ ಮಾಡಲಾಗುವುದು ಎಂದು ಪ್ರಕಟಿಸಿದರು.

ಕಲಬುರಗಿಯಲ್ಲಿ ಅನುಭವ ಮಂಟಪ
ಕಲ್ಯಾಣ ಕರ್ನಾಟಕ ಹೆಬ್ಟಾಗಿಲು ಕಲಬುರಗಿಯಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಮೊದಲ ಕಂತಾಗಿ 20 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಸಿಎಂ ಪ್ರಕಟಿಸಿದರು. ಮಠಾಧೀಶರು ಒಂದೆಡೆ ಕುಳಿತು ಚರ್ಚಿಸಲು ಸಭಾ ಭವನ, ಪೂಜಾ ಭವನ, ಸಂಸ್ಕಾರ ಶಿಬಿರ ಭವನ, ಬಸವಾದಿ ಶರಣರ ಗ್ರಂಥಾಲಯಗಳನ್ನು ಒಳಗೊಂಡ ಸುಮಾರು 50 ಕೋಟಿ ರೂ. ವೆಚ್ಚದ ಅನುಭವ ಮಂಟಪ ರಚಿಸುವುದಾಗಿ ಹೇಳಿದರು. ಇದೇ ವೇಳೆ ಕಲ್ಯಾಣ ಕರ್ನಾಟಕ ಭಾಗದ 200ಕ್ಕೂ ಹೆಚ್ಚು ಸ್ವಾಮೀಜಿಗಳು ಸಿಎಂ ಯಡಿಯೂರಪ್ಪ ಅವರನ್ನು ಸನ್ಮಾನಿಸಿದರು.

Advertisement

ಬಿಎಸ್‌ವೈ ತಂಟೆಗೆ ಬಂದರೆ ಸುಮ್ಮನಿರಲ್ಲ
ಬಿ.ಎಸ್‌.ಯಡಿಯೂರಪ್ಪ ಅವರು ಅಭಿನವ ಬಸವಣ್ಣನಂತಿದ್ದು, ಮಠಾಧೀಶರ ಪಾಲಿಗೆ ಎಂದಿದಿಗೂ ಅವರೇ ಮುಖ್ಯಮಂತ್ರಿಯಾಗಿದ್ದಾರೆ ಎಂದು ದೇವಾಪುರ ಮಠದ ಶಿವಮೂರ್ತಿ ಸ್ವಾಮೀಜಿ ಹೇಳಿದರು. ಒಂದು ವೇಳೆ ಅವರನ್ನು ಕೆಣಕಿದರೆ ನಾವು ಬೀದಿಗಿಳಿಯುತ್ತೇವೆ ಎಂದೂ ಎಚ್ಚರಿಕೆ ನೀಡಿದರು. ಸುಲಫ‌ಲ ಮಠಾಧೀಶ ಹಾಗೂ ಶ್ರೀಶೈಲ ಸಾರಂಗ ಮಠದ ಜಗದ್ಗುರು ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಮುಂದಿನ ಚುನಾವಣೆವರೆಗೂ ಬಿಎಸ್‌ವೈ ಅವರೇ ಸಿಎಂ ಆಗಿರಬೇಕು, ಅದಕ್ಕಿಂತ ಮುಂಚೆ ಇಳಿಸಿದರೆ 3000 ಮಠಾಧೀಶರೂ ದಿಲ್ಲಿಗೆ ಬರಬೇಕಾಗುತ್ತದೆ ಎಂದು ಗುಡುಗಿದರು.

Advertisement

Udayavani is now on Telegram. Click here to join our channel and stay updated with the latest news.

Next