ಬೆಳಗಾವಿ : ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕದ ಕಾಂಗ್ರೆಸ್ ಶಾಸಕರು ಸೋಮವಾರ ಸಭೆ ನಡೆಸಿ ಮಹತ್ವದ ವಿಚಾರ ಚರ್ಚೆ ಮಾಡಿದ್ದಾರೆ.
ಅಜಯ್ ಸಿಂಗ್, ಪ್ರಿಯಾಂಕ್ ಖರ್ಗೆ,ಅಮರೇಗೌಡ ಬಯ್ಯಾಪುರ,ಪರಮೇಶ್ವರ್ ನಾಯ್ಕ್ ಸೇರಿದಂತೆ ಹನ್ನೆರಡು ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು.
ಹೈದರಾಬಾದ್ ಕರ್ನಾಟಕ ವಿಷಯಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡಲು ಅವಕಾಶ ಕೇಳಬೇಕು, ಚರ್ಚೆ ಮಾಡಲು ನಿಳುವಳಿ ಸೂಚನೆ ನೀಡುವ ಬಗ್ಗೆ ಸಭೆಯಲ್ಲಿ ಮಾತುಕತೆ ನಡೆಸುವುದು, ಪಕ್ಷದ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ನಿಳುವಳಿ ಸೂಚನೆ ನೀಡಲು ಚರ್ಚೆ, ನಿಳುವಳಿ ಸೂಚನೆ ನೀಡಿದರೆ ಕಲ್ಯಾಣ ಕರ್ನಾಟಕದ ಬಗ್ಗೆ ಚರ್ಚೆಗೆ ಅವಕಾಶ ಸಿಗಬಹುದು ಎಂದು ಮಾತುಕತೆ ನಡೆಸಲಾಗಿದೆ ಎಂದು ಸಭೆಯ ಬಳಿಕ ಈಶ್ವರ ಖಂಡ್ರೆ ಹೇಳಿಕೆ ನೀಡಿದ್ದಾರೆ.
ಕಲ್ಯಾಣ ಕರ್ನಾಟಕ ವಿಷಯ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ, ಸಿಎಂ ಕಳೆದ ಅಧಿವೇಶನದಲ್ಲಿ 10 ದಿನದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ ಮಾಡುತ್ತೇನೆ ಎಂದು ಹೇಳಿದ್ದರು. ಮೂರು ತಿಂಗಳು ಕಳೆದರೂ ಮಂಡಳಿ ರಚನೆ ಆಗಿಲ್ಲ.ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕಕ್ಕಾಗಿ 1500 ಕೋಟಿ ಘೋಷಣೆಯಾಗಿದೆ.ಇಲ್ಲಿಯವರೆಗೆ 330 ಕೋಟಿ ಮಾತ್ರ ಖರ್ಚಾಗಿದೆ. ಒಂದೇ ಒಂದು ನೀರಾವರಿ ಯೋಜನೆ, ರಸ್ತೆ ಆಗಿಲ್ಲ.ಎರಡನೇ ದರ್ಜೆ ರೀತಿಯಲ್ಲಿ ನೋಡಲಾಗುತ್ತಿದೆ.ಆದ್ದರಿಂದ ಹೈದರಾಬಾದ್ ಕರ್ನಾಟಕ ಶಾಸಕರು ಸೇರಿ ಚರ್ಚೆ ಮಾಡಿದ್ದೇವೆ. ನಾಳೆ ನಿಳುವಳಿ ಸೂಚನೆ ನೀಡುವ ಬಗ್ಗೆ ಮಾತಾಡಿದ್ದೇವೆ. ಈ ಭಾಗದ ಬಗ್ಗೆ ಚರ್ಚೆ ಆಗಬೇಕು ಎಂದು ಬೆಳಗಾವಿಯಲ್ಲಿ ಅಧಿವೇಶನ ಮಾಡಲಾಗುತ್ತದೆ.
ಆದರೆ ಅಧಿವೇಶನದಲ್ಲಿ ಬರೀ ಶೂನ್ಯವಾಗಿದೆ. ವಿಪಕ್ಷದವರನ್ನು ಕೆಣಕಿ, ಸದನ ನಡೆಯದ ರೀತಿಯಲ್ಲಿ ಮಾಡುವುದು ಅವರ ಹುನ್ನಾರವಾಗಿದೆ.
ತರಾತುರಿಯಲ್ಲಿ ಬಿಲ್ ಪಾಸ್ ಮಾಡಲು ಮುಂದಾಗಿದ್ದಾರೆ. ಕಾಟಚಾರಕ್ಕೆ ಅಧಿವೇಶನ ನಡೆಸಲಾಗುತ್ತಿದೆ ಎಂದರು.
*ಬೆಳಗಾವಿ ಘಟನೆ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂಬ ಸಿಟಿ ರವಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಟಿ ರವಿ ಒಂದು ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅವರ ಹೇಳಿಕೆಗೆ ಯಾವುದೇ ಕಿಮ್ಮತಿಲ್ಲ. ಸುಳ್ಳುನ್ನು ಸತ್ಯ ಮಾಡಲು ಹೊರಟಿದ್ದಾರೆ. ಅವರ ಬಣ್ಣ ಬಯಲಾಗಿದೆ. ದುರ್ಬಲ ಸರ್ಕಾರವಿದೆ, ಅದಕ್ಕಾಗಿ ಪ್ರತಿಮೆ ಧ್ವಂಸ, ಕನ್ನಡ ಬಾವುಟ ಸುಡುವ ಕೆಲಸವಾಗುತ್ತಿದೆ ಎಂದರು.