ರಾಯಚೂರು/ವಿಜಯಪುರ: ಬಿಜೆಪಿ ಶಾಸಕರು ಒಂದೆಡೆ ಕೂಡಿ, ಅಭಿವೃದ್ಧಿ ಕುರಿತು, ಬಜೆಟ್‌ನಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಪಡೆ ಯಲು ಚರ್ಚಿಸಿದ ಮಾತ್ರಕ್ಕೆ ಪ್ರತ್ಯೇಕ ಸಭೆ ಎಂದು ಭಾವಿಸುವುದು ಸರಿಯಲ್ಲ. ಅದೇನು ತಪ್ಪಲ್ಲ. ಮಾಧ್ಯಮಗಳಲ್ಲಿ ಬಿಂಬಿತವಾಗಿರುವಂತೆ ಏನೂ ಚರ್ಚೆಯಾಗಿಲ್ಲ. ಯಡಿಯೂರಪ್ಪ ಅವರೇ ನಮ್ಮ ಸರ್ವೋತ್ಛ ನಾಯಕ, ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.
ವಿಜಯಪುರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್‌ನ ಕೆಲವು ನಾಯಕರು ಷಡ್ಯಂತ್ರ ನಡೆಸಿ, ಮುಖ್ಯಮಂತ್ರಿ ಪುತ್ರನ ಕುರಿತು ಆರೋಪವುಳ್ಳ ರಹಸ್ಯ ಪತ್ರದ ಬಗ್ಗೆ ಅಪಪ್ರಚಾರ ನಡೆಸಿದ್ದಾರೆ. ಆಡಳಿತ ಪಕ್ಷದ ಶಾಸಕರು ಒಂದೆಡೆ ಕುಳಿತು ಚರ್ಚಿಸಿದ ಮಾತ್ರಕ್ಕೆ ಪ್ರತ್ಯೇಕತೆ ಭಾವನೆ ಎನ್ನಲಾಗದು. ಇಂಥ ವಿಷಯಗಳ ಕುರಿತು ಮುಖ್ಯಮಂತ್ರಿಗಳು ನೋಡಿಕೊಳ್ಳುತ್ತಾರೆ ಎಂದರು.
ಮಾಜಿ ಮುಖ್ಯಮಂತ್ರಿಯಾಗಿರುವ ಪಕ್ಷದ ಹಿರಿಯ ನಾಯಕ ಜಗದೀಶ ಶೆಟ್ಟರ ನೇತೃತ್ವದಲ್ಲಿ ಸಭೆ ನಡೆಸಿದ್ದರಲ್ಲಿ ತಪ್ಪೇನಿಲ್ಲ. ಸಭೆಗೆ ಬಂದವರಲ್ಲಿ ಉತ್ತರ ಕರ್ನಾಟಕದ ಶಾಸಕರೇ ಇದ್ದರು. ಸಭೆಯಲ್ಲಿ ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಪಡೆಯುವ ಬಗ್ಗೆ, ತಮ್ಮ ಭಾಗದಲ್ಲಿ ಹೆಚ್ಚು ಅಭಿವೃದ್ಧಿ ವಿಷಯವಾಗಿ ಚರ್ಚಿಸಿದ್ದಾರೆ. ತಮ್ಮ ಕ್ಷೇತ್ರಕ್ಕೂ ಏನಾದರೂ ಹೆಚ್ಚಿನ ಲಾಭ ಸಿಗಲಿದೆ ಎಂದು ಶಾಸಕರು ಸಭೆ ಸೇರಿರಬಹುದೇ ಹೊರತು ಮಾಧ್ಯಮಗಳಲ್ಲಿ ಬಿಂಬಿತವಾದಂತೆ ಏನೂ ಇಲ್ಲ. ಸಿಎಂ ಯಡಿಯೂರಪ್ಪ ಅವರು ಪ್ರಶ್ನಾತೀತ ನಾಯಕರು. ಅವರಿಗೆ ಕೇಡು ಮಾಡುವ ಉದ್ದೇಶ ಯಾರಿಗೂ ಇಲ್ಲ ಎಂದರು.
ಸಿಎಂ ವಿವೇಚನೆಗೆ ಬಿಟ್ಟಿದ್ದು: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಮತ್ತೂಂದು ಜಿಲ್ಲೆ ರಚಿಸುವ ವಿಷಯ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು. ಸರ್ಕಾರದ ಸಚಿವನಾಗಿ ಮುಖ್ಯಮಂತ್ರಿಗೆ ಮುಜುಗುರ ಉಂಟು ಮಾಡುವ ಕೆಲಸ ಮಾಡಲಾರೆ. ಬಳ್ಳಾರಿ ವಿಭಜನೆ ವಿಷಯ ದಲ್ಲಿ ಎಲ್ಲ ಶಾಸಕರನ್ನು ಕರೆದು ಮುಖ್ಯಮಂತ್ರಿಗಳು ಅಭಿಪ್ರಾಯ ಪಡೆದಿದ್ದಾರೆ. ಹೀಗಾಗಿ, ಸಚಿವನಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧವಾಗಿರುತ್ತೇನೆ ಎಂದರು. ದೆಹಲಿಗೆ ಹೋಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ನನ್ನ ಮಗಳ ವಿವಾಹಕ್ಕೆ ಆಹ್ವಾನಿಸಿದ್ದೇನೆ. ಈ ಸಂದರ್ಭ ದಲ್ಲಿ ರಾಜಕೀಯದ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಪಾಕ್‌ಗೆ ಜಯವಾಗಲಿ ಎನ್ನುವ ಸ್ಥಿತಿಗೆ ತಲುಪಿದ ಕಾಂಗ್ರೆಸ್: ಕಾಂಗ್ರೆಸ್ ನಾಯಕರು ಭಾರತವನ್ನು ಪಾಕಿಸ್ತಾನಕ್ಕೆ ಒತ್ತೆ ಇಟ್ಟು ಪಾಕಿ ಸ್ತಾನಕ್ಕೆ ಜಯವಾಗಲಿ ಎನ್ನುವ ಹಂತಕ್ಕೆ ತಲುಪಿದ್ದಾರೆ. ಪಾಕಿ ಸ್ತಾನಕ್ಕೆ ಜಿಂದಾಬಾದ್ ಎನ್ನುವವರ ಪರ ಕಾಂಗ್ರೆಸ್ ನಾಯಕರು ಮಾತನಾಡು ತ್ತಿದ್ದಾರೆ. ನೆರೆ, ಬರದ ಚರ್ಚೆ ಮಾಡುವುದನ್ನು ಬಿಟ್ಟು ದೇಶ ದ್ರೋಹಿಗಳ ವಿಚಾರವಾಗಿ ಸದನ ಬಹಿಷ್ಕರಿಸುವ ಮೂಲಕ ಕಾಂಗ್ರೆಸ್ ನಾಯಕರು ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದ್ದಾರೆ. ಮಾಜಿ ಸಿಎಂ ಸಿದ್ದ ರಾಮಯ್ಯ ಅವರೂ ಅದೇ ದಾಟಿಯಲ್ಲಿ ಮಾತನಾಡು ತ್ತಿರುವುದು ಶೋಚನೀಯ. ಆದರೆ, ಈ ವಿಚಾರದಲ್ಲಿ ನಾವು ಕೈ ಕಟ್ಟಿ ಕೂಡುವುದಿಲ್ಲ ಎಂದರು.
ದೇಶದ್ರೋಹಿಗಳ ರಕ್ಷಿಸುವ ಮಾತೇ ಇಲ್ಲ: ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಸುಮ್ಮನೆ ಬಿಡುವುದಿಲ್ಲ. ಅಜ್ಮಲ್ ಕಸಬ್‌ನನ್ನು ಹಿಂದೂ ಭಯೋತ್ಪಾದಕ ಎಂದು ಬಿಂಬಿಸಲು ಮುಂದಾ ಗಲಾಗಿತ್ತು ಎಂಬ ಅಂಶ ಬಯಲಾಗಿದೆ. ಕಸಬ್‌ಗ ಬೆಂಗಳೂರಿನ ವಿಳಾ ಸವಿತ್ತು ಎಂಬ ಮಾಹಿತಿ ಇದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದರು. ಸರ್ಕಾರ ಹುಬ್ಬಳ್ಳಿ, ಬೀದರ ಘಟನೆಗಳನ್ನು ಪ್ರತ್ಯೇಕವಾಗಿ ನೋಡುವುದಿಲ್ಲ. ಯಾರೂ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯ ವಿಲ್ಲ. ಹುಬ್ಬಳ್ಳಿ ಘಟನೆಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಿರುವುದು ತನಿಖೆಯ ಭಾಗ ಎಂದರು.
ಕೇಂದ್ರದಿಂದ ಅನ್ಯಾಯವಾಗಿಲ್ಲ: ಕೇಂದ್ರದಿಂದ ರಾಜ್ಯಕ್ಕೆ ಬರ ಬೇಕಾದ ಅನುದಾನದಲ್ಲಿ ಅನ್ಯಾಯವಾಗಿಲ್ಲ. ಈಗಾಗಲೇ ಎರಡು ಹಂತದಲ್ಲಿ ಹಣ ಬಂದಿದೆ. ಬಾಕಿ ಹಣವನ್ನು ಹಂತ ಹಂತವಾಗಿ ನೀಡುವ ವಿಶ್ವಾಸವಿದೆ ಎಂದರು. ಹಿಂದುಳಿದ ವರ್ಗಗಳ ವಿದ್ಯಾರ್ಥಿ ಗಳ ಬಾಕಿ ಶಿಷ್ಯವೇತನ ಪಾವತಿ ಕುರಿತು ಸಿಎಂ ಜತೆ ಚರ್ಚಿಸಿದ್ದು, ಶೀಘ್ರವೇ ಅನುದಾನ ಬಿಡುಗಡೆಯಾಗುವ ವಿಶ್ವಾಸವಿದೆ. ಮಕ್ಕಳಲ್ಲಿ ಪ್ರೋಟಿನ್ ಅಂಶ ಹೆಚ್ಚಿಸಲು 15 ಕೋಟಿ ರೂ. ಮಂಜೂರು ಮಾಡ ಲಾಗಿದೆ. ಯಶಸ್ವಿನಿ ಮರು ಜಾರಿ ಸೇರಿ ಅನೇಕ ಹೊಸ ಯೋಜನೆ ಗಳನ್ನು ಬಜೆಟ್‌ನಲ್ಲಿ ಘೋಷಿಸುವ ಸಾಧ್ಯತೆಗಳಿವೆ ಎಂದು ಹೇಳಿದರು.
ಆನಂದಸಿಂಗ್, ನಾಗೇಂದ್ರ ಅವರು ಕಾಂಗ್ರೆಸ್‌ನಿಂದ ನಿಂತು ಗೆದ್ದಾಗ ಪ್ರಾಮಾಣಿಕರು ಎಂದು ಕಾಂಗ್ರೆಸ್ ಮುಖಂಡರೇ ಕೊಂಡಾಡಿದ್ದರು. ಈಗ ಬಿಜೆಪಿಯಿಂದ ಸಚಿವರಾದ ಕೂಡಲೇ ಕಳಂಕಿತರಾಗಿಬಿಟ್ಟರೆ? ಆನಂದಸಿಂಗ್ ಮೇಲೆ ಹೇರಲಾದ ಪ್ರಕರಣಗಳಲ್ಲಿ ಅವರು ನೇರವಾಗಿ ಭಾಗಿಯಾಗಿಲ್ಲ. ಪ್ರಕರಣ ನ್ಯಾಯಾಲಯದಲ್ಲಿದ್ದು, ತೀರ್ಮಾನವಾಗಲಿದೆ. ಬಳ್ಳಾರಿ ನಾಯಕರ ಮೇಲೆ ಪ್ರಕರಣ ದಾಖಲಿಸುವ ಮೂಲಕ ಜಿಲ್ಲೆಗೆ ಕೆಟ್ಟ ಹೆಸರು ತರುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಲೇ ಬಂದಿದೆ. ಈ ಹಿಂದೆ ಜನಾರ್ದನರೆಡ್ಡಿ ವಿಚಾರದಲ್ಲೂ ಹೀಗೆ ನಡೆದುಕೊಂಡಿತ್ತು.
-ಬಿ. ಶ್ರೀರಾಮುಲು, ಆರೋಗ್ಯ ಸಚಿವ