Advertisement

ಹೆತ್ತವರ ಪ್ರತ್ಯೇಕ ಜೀವನ: ಬೇಸತ್ತ ಬಾಲಕ ಆತ್ಮಹತ್ಯೆ

11:29 AM Aug 30, 2017 | Team Udayavani |

ಬೆಂಗಳೂರು: ವೈಯಕ್ತಿಕ ಕಾರಣಕ್ಕೆ ತಂದೆ ಮತ್ತು ತಾಯಿ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರಿಂದ ಖನ್ನತೆಗೆ ಒಳಗಾಗಿದ್ದ ಬಾಲಕನೊಬ್ಬ ಡೆತ್‌ನೋಟ್‌ ಬರೆದಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಪಂಗಿರಾಮನಗರದಲ್ಲಿ ಸೋಮವಾರ ಸಂಜೆ ನಡೆದಿದೆ.

Advertisement

ವಿನಾಯಕ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಪ್ರವೀಣ್‌ ರಾಜ್‌ (13) ಆತ್ಮಹತ್ಯೆ ಮಾಡಿಕೊಂಡ ಬಾಲಕ. ತಾಯಿಯೊಂದಿಗೆ ವಾಸವಾಗಿದ್ದ ಈತ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರವೀಣ್‌ರಾಜ್‌ ತಂದೆ ಆನಂದ್‌ ಭದ್ರತಾ ಸಿಬ್ಬಂದಿಯಾಗಿದ್ದು, ತಾಯಿ ದೀಪಾ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಕೆಲ ವರ್ಷಗಳಿಂದ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು. ಇದರಿಂದ ಪ್ರವೀಣ್‌ರಾಜ್‌ ಮಾನಸಿಕ ಖನ್ನತೆಗೊಳಗಾಗಿದ್ದ. ಮನೆಯಲ್ಲಿ ಚಿಕ್ಕಮಗುವಿನಂತೆ ವರ್ತಿಸುತ್ತಿದ್ದ.

 ತಂದೆಯಿಂದ ದೂರವಾಗಿದ್ದ ಪ್ರವೀಣ್‌ರಾಜ್‌ ತಾಯಿ ದೀಪಾ ಮತ್ತು ಮಾವ ಸುರೇಶ್‌ ಜತೆ ಸಂಪಂಗಿರಾಮನಗರದಲ್ಲಿ ವಾಸವಾಗಿದ್ದ. ಒಟ್ಟಿಗೆ ಜೀವನ ನಡೆಸುವಂತೆ ಪೋಷಕರಿಗೆ ಮನವಿ ಮಾಡಿಕೊಂಡಿದ್ದ. ಆದರೆ, ಇದಕ್ಕೆ ಅಪ್ಪ-ಅಮ್ಮ ಇಬ್ಬರೂ ಸರಿಯಾದ ಸ್ಪಂದಿಸಿರಲಿಲ್ಲ. ಇದರಿಂದ ನೊಂದಿದ್ದ ಪ್ರವೀಣ್‌ ಮಾನಸಿಕ ಖನ್ನತೆಗೊಳಗಾಗಿದ್ದ.

ಯಾರೊಂದಿಗೂ ಸೇರುತ್ತಿರಲಿಲ್ಲ. ಶಾಲೆಯಲ್ಲೂ ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಸದಾ ಒಂಟಿಯಾಗಿಯೇ ಇರುತ್ತಿದ್ದ. ಈ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ತಾಯಿಯ ಸೀರೆಯಲ್ಲೇ ಪ್ರವೀಣ್‌ರಾಜ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ವಿವರಿಸಿದರು.

Advertisement

ಪತ್ನಿ ಸೋದರನ ಮೇಲೆ ಹಲ್ಲೆ
ಮೃತ ಪ್ರವೀಣ್‌ರಾಜ್‌ ದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಈ ವೇಳೆ ಸ್ಥಳಕ್ಕೆ ಬಂದ ತಂದೆ ಆನಂದ್‌, ತನ್ನ ಮಗ ಸಾಯಲು ಭಾಮೈದ ಸುರೇಶ್‌ ಕಾರಣ. ಈತನ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿ ಮನಬಂದಂತೆ ಥಳಿಸಿದ್ದು, ಸುರೇಶ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಈ ಬಗ್ಗೆ ಎಲ್ಲಿಯೂ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಐ ವಿಲ್‌ ಕಮ್‌ ಬ್ಯಾಕ್‌!
ಸೋಮವಾರ ಬೆಳಗ್ಗೆ ತಾಯಿ ಮತ್ತು ಮಾವ ಎಂದಿನಂತೆ ಕೆಲಸಕ್ಕೆ ತೆರಳಿದ್ದಾರೆ. ಈ ವೇಳೆ  ಪ್ರವೀಣ್‌ ರಾಜ್‌, ಡೆತ್‌ನೋಟ್‌ ಬರೆದಿಟ್ಟಿದ್ದು, “ಐ ಯಾಮ್‌ ವೇರಿ ವೇರಿ ಸಾರಿ.. ಐ ವಿಲ್‌ ಕಮ್‌ ಬ್ಯಾಕ್‌’ ಎಂದು ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂಜೆ ತಾಯಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಪಂಗಿರಾಮನಗರ ಠಾಣೆಯಲ್ಲಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next