Advertisement

ವಿಲೇವಾರಿಗೆ ಪ್ರತ್ಯೇಕ ಮಾರ್ಗಸೂಚಿ: ಖಾದರ್‌

01:09 AM Jul 18, 2019 | Team Udayavani |

ಮಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಸ್ವಾಮ್ಯದ ವಾಣಿಜ್ಯ ಮಳಿಗೆಗಳ ಹರಾಜು, ಬಾಡಿಗೆ, ಗುತ್ತಿಗೆ ಅವಧಿ ಸಂಬಂಧಿಸಿ ಮತ್ತು ನಗರ ಪಾಲಿಕೆ ಸಹಿತ ನಗರ ಸ್ಥಳೀಯ ಸಂಸ್ಥೆಗಳ ವಾಣಿಜ್ಯ ಮಳಿಗೆಗಳ ವಿಲೇವಾರಿ ಸಂಬಂಧಿಸಿ ಪ್ರತ್ಯೇಕ ಮಾರ್ಗಸೂಚಿ ಜಾರಿಗೊಳಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ ಉಳಿದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಈ ಮಾರ್ಗಸೂಚಿ ಅನ್ವಯವಾಗಲಿದೆ ಎಂದರು.

ನೂತನ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಿ ವಿಲೇವಾರಿ ಮಾಡುವ ಸಂದರ್ಭ ಪತ್ರಿಕಾ ಪ್ರಕಟನೆ ಹೊರಡಿಸಿ ಬಹಿರಂಗ/ಇ-ಹರಾಜು ಮೂಲಕ ವಿಲೇವಾರಿ ಮಾಡಬೇಕು. 12 ವರ್ಷ ಅವಧಿಗೆ ಮಾತ್ರ ಲೀಸ್‌ ನೀಡಬೇಕು. ವಾಣಿಜ್ಯ ಮಳಿಗೆಯ ನಿರ್ಮಾಣ ವೆಚ್ಚದ ಆಧಾರದ ಮೇಲೆ ಠೇವಣಿ ಮೊತ್ತ ನಿರ್ಧರಿಸಬೇಕು. ಪ್ರತಿ ತಿಂಗಳ ಬಾಡಿಗೆಯನ್ನು ಮುಂದಿನ ತಿಂಗಳ 10ನೇ ತಾರೀಕಿನ ಒಳಗೆ ಪಾವತಿ ಮಾಡದಿದ್ದರೆ ಶೇ.2ರಷ್ಟು ಬಡ್ಡಿ ಸಂಗ್ರಹ ಮೊದಲಾದ ಅಂಶಗಳು ಮಾರ್ಗಸೂಚಿಯಲ್ಲಿವೆ. ಎಲ್ಲ ಮಳಿಗೆಗಳಿಗೆ ಏಕರೂಪದ ಬಾಡಿಗೆ ನಿಗದಿ ಪಡಿಸಿದ ಪರಿಣಾಮ ನೆಲಮಹಡಿಯ ಮಳಿಗೆಗಳು ಮಾತ್ರ ಹರಾಜುಗೊಂಡು, ಮೇಲಿನ ಅಂತಸ್ತುಗಳ ಮಳಿಗೆಗಳು ಬಾಕಿ ಉಳಿದಿರುವುದು ಕಂಡುಬಂದಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಮಟ್ಟದಲ್ಲಿ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಬಾಡಿಗೆ ಮೊತ್ತ ಪರಿಷ್ಕರಿಸಲು ಅವಕಾಶ ನೀಡಲಾಗಿದೆ ಎಂದರು.

ಕರಡು ನಿಯಮಾವಳಿ
ರಾಜ್ಯದಲ್ಲಿ ವಸತಿಗೃಹ, ಹಾಸ್ಟೆಲ್‌, ಪಿ.ಜಿ.ಗಳಿಗೆ ಸಂಬಂಧಿಸಿ ಕರ್ನಾಟಕ ಬೋರ್ಡಿಂಗ್‌ ಮತ್ತು ಲಾಡಿjಂಗ್‌ ಹೌಸ್‌ ನಿಯಂತ್ರಣ ಕಾನೂನು ರೂಪಿಸಲು ಕರಡು ನಿಯಮಾವಳಿ ಪ್ರಕಟಿಸಲಾಗಿದೆ. ಸಾರ್ವಜನಿಕರಿಂದ ಅಕ್ಷೇಪ, ಸಲಹೆ ಸ್ವೀಕರಿಸಿದ ಬಳಿಕ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಜಾರಿಗೊಳಿಸಲು ಸರಕಾರ ನಿರ್ಧರಿಸಿದೆ. ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು 30 ದಿನಗಳ ಕಾಲಾವಕಾಶವಿದೆ ಎಂದರು.

ವಿಶ್ವಾಸಮತ ಗೆಲುವು: ಖಾದರ್‌ ವಿಶ್ವಾಸ
ರಾಜ್ಯ ಸರಕಾರ ಸುಭದ್ರವಾಗಿದೆ. ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆಲ್ಲುವ ಸಂಪೂರ್ಣ ಭರವಸೆಯಿದೆ. ಸಂವಿಧಾನಬದ್ಧವಾಗಿ ರಚನೆಯಾಗಿರುವ ಮೈತ್ರಿ ಸರಕಾರವನ್ನು ಯಾವುದೇ ಕಾರಣಕ್ಕೂ ಉರುಳಿಸಲು ಸಾಧ್ಯವಿಲ್ಲ ಎಂಬ ಸಂದೇಶ ರಾಜ್ಯದಿಂದ ದೇಶದ ಜನತೆಗೆ ಹೋಗಬೇಕು ಎಂದು ಸಚಿವ ಯು.ಟಿ. ಖಾದರ್‌ ಇದೇವೇಳೆ ಅಭಿಪ್ರಾಯಪಟ್ಟಿದ್ದಾರೆ.

Advertisement

ಸ್ಥಳೀಯರಿಗೆ ಸುಂಕ ನಿಯಮಬಾಹಿರ
ಸುರತ್ಕಲ್‌ನಲ್ಲಿ ಸ್ಥಳೀಯ ವಾಹನಗಳಿಂದ ಸುಂಕ ವಸೂಲಿ ಮಾಡದಂತೆ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ ಹಾಗೂ ಸಂಬಂಧಪಟ್ಟ ಸಚಿವಾಲಯವನ್ನು ಕೋರಲಾ ಗಿದ್ದು, ರಾಜ್ಯ ಅಪರ ಮುಖ್ಯ ಕಾರ್ಯದರ್ಶಿ ಅವರು ಎನ್‌ಎಚ್‌ಎಐ ಪ್ರಾದೇಶಿಕ ಅಧಿಕಾರಿ ಮತ್ತು ಮುಖ್ಯ ಎಂಜಿನಿಯರ್‌ಗೆ ಪತ್ರ ಬರೆದು ಈ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಖಾದರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವಿನಾಯಿತಿ ಒಪ್ಪಂದದಲ್ಲಿದೆ
ಕೇಂದ್ರದ ಯೋಜನೆಗಳ ಜಾರಿ ಸಂದರ್ಭ ರಾಜ್ಯ ಸರಕಾರದ ಜತೆ ಕೆಲವು ವಿನಾಯಿತಿ ಒಪ್ಪಂದ ನಡೆಯುತ್ತದೆ. ಹೆದ್ದಾರಿ ವಿಸ್ತೀರ್ಣ ಸಂದರ್ಭ ಜಾಗ ಕಳೆದುಕೊಂಡವರಿಗೆ, ಸ್ಥಳೀಯರಿಗೆ ವಿನಾಯಿತಿ ನೀಡುವ ಅಂಶವೂ ಅದರಲ್ಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next