ಕೊಪಳ: ಸರ್ಕಾರವು ಪ್ರತಿನಿತ್ಯ ಕಠಿಣ ನಿಲುವು ಪ್ರಕಟಿಸುವ ಮೂಲಕ ಕೊರೊನಾ ವೈರಸ್ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದೆ. ಮಾರ್ಚ್‌ನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿದ್ದು, ಆ ವೇಳೆ ವಿದ್ಯಾರ್ಥಿಗಳಿಗೆ ಜ್ವರ, ಕೆಮ್ಮು, ನೆಗಡಿ ಕಂಡುಬಂದರೆ ಅವರಿಗೆ ಪ್ರತ್ಯೇಕ ಪರೀಕ್ಷಾ ಕೊಠಡಿ ವ್ಯವಸ್ಥೆ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಹೌದು. ಸಾರ್ವಜನಿಕ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಲವು ನಿರ್ಧಾರ ಕೈಗೊಳ್ಳುತ್ತಿದೆ. ಈಗಾಗಲೇ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯ ಮುಖ್ಯಘಟ್ಟವಿದ್ದು, ಅವರಿಗೆ ಪರೀಕ್ಷೆಯಲ್ಲಿ ತೊಡಗುವಂತೆ ಮಾಡಲು ಹತ್ತಾರು ನಿರ್ಧಾರ ಕೈಗೊಳ್ಳಲಾಗಿದೆ.
ಕೇಂದ್ರದಲ್ಲಿ ಕೈತೊಳೆದುಕೊಳ್ಳಬೇಕು: ರಾಜ್ಯಾದ್ಯಂತ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಬಂದರೆ ಯಾವುದೇ ತೊಂದರೆಯಿಲ್ಲ. ಅಂತಹ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕೂಡುವಂತೆ ಮಾಡಲು ರಾಜ್ಯ ಸರ್ಕಾರವು ನಿರ್ಧಾರ ಕೈಗೊಂಡಿದೆ. ಕೇಂದ್ರದ ಅಧೀಕ್ಷಕರು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡುವಂತೆಯೂ ಸೂಚನೆ ನೀಡಿದೆ. ಅಲ್ಲದೇ, ಕೇಂದ್ರದಲ್ಲಿ ಸ್ಯಾನಿಟೈಸರ್‌ಗಳನ್ನು ಇಟ್ಟು ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ, ಎಲ್ಲ ಹಂತದ ಅಧಿಕಾರಿಗಳಿಗೆ, ಸಿಬ್ಬಂದಿಗೆ ಕೈಗಳನ್ನು ಸ್ವತ್ಛವಾಗಿ ತೊಳೆದುಕೊಂಡು ಪರೀಕ್ಷಾ ಕಾರ್ಯದಲ್ಲಿ ತೊಡಗುವಂತೆಯೂ ಸೂಚನೆ ನೀಡಿದೆ.
ಕೆಮ್ಮು, ಜ್ವರವಿದ್ದರೆ ಪ್ರತ್ಯೇಕ ಕೊಠಡಿ: ಇನ್ನೂ ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಕೆಮ್ಮು, ನೆಗಡಿ ಹಾಗೂ ಜ್ವರವಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಿಸಿ ಅಲ್ಲಿ ಕುಳಿತು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವಂತೆಯೂ ಎಲ್ಲ ಡಿಡಿಪಿಐ, ಬಿಇಒ ಹಾಗೂ ಡಯಟ್ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಬಿಇಒಗಳು ಎಲ್ಲ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೂ ಈ ವಿಷಯವನ್ನು ರವಾನೆ ಮಾಡಿದ್ದಾರೆ.
ಸೂಕ್ಷ್ಮ ಜಿಲ್ಲೆಗಳಲ್ಲಿ ಹೆಚ್ಚಿನ ಕಾಳಜಿ: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದ್ದು, ಅಂತಹ ಜಿಲ್ಲೆಗಳ ಮೇಲೆ ಶಿಕ್ಷಣ ಇಲಾಖೆ ವಿಶೇಷ ಕಾಳಜಿ ವಹಿಸಿದೆ. ಸಾಮಾನ್ಯವಾಗಿ ಒಂದು ಪರೀಕ್ಷಾ ಕೊಠಡಿಯಲ್ಲಿ 24 ವಿದ್ಯಾರ್ಥಿಗಳು ಕುಳಿತು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುತ್ತದೆ. ಆದರೆ ಸೂಕ್ಷ್ಮ ಪ್ರದೇಶದ ಜಿಲ್ಲೆಯಲ್ಲಿ 15-20 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿದೆ. ಇನ್ನೂ ವಿದ್ಯಾರ್ಥಿಯಿಂದ ಮತ್ತೂಬ್ಬ ವಿದ್ಯಾರ್ಥಿಯ ನಡುವೆ ಅಂತರ ಕಾಯ್ದುಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಒಟ್ಟಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಕ್ಕಳಿಗೆ ಮುಖ್ಯಘಟ್ಟವಾಗಿದ್ದರೆ, ಸರ್ಕಾರಕ್ಕೆ ಇಕ್ಕಟ್ಟಿನ ಪರಿಸ್ಥಿತಿ ಎಂಬಂತ್ತಾಗಿದೆ. ಅನಿವಾರ್ಯತೆ ನಡುವೆಯೂ ಪರೀಕ್ಷೆ ನಡೆಸಲೇಬೇಕಿದೆ. ಈ ಮಧ್ಯೆ ಕೊರೊನಾ ವೈರಸ್ ಬಗ್ಗೆ ನಿಗಾ ವಹಿಸಿ ನಿಯಂತ್ರಣದಲ್ಲಿಡಲು ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಕೊರೊನಾ ಎಫೆಕ್ಟ್ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸಿ ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ಸರ್ಕಾರದಿಂದ ಆದೇಶ ಬಂದಿದೆ. ಅಂತಹ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಿದ್ದೇವೆ. ಜ್ವರ, ಕೆಮ್ಮು, ನೆಗಡಿ ಇರುವಂತಹ ವಿದ್ಯಾರ್ಥಿಗಳಿದ್ದರೆ ಅಂತಹವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸುವಂತೆಯೂ ಆದೇಶ ಬಂದಿದ್ದು, ಆ ಮಾಹಿತಿಯನ್ನೂ ಎಲ್ಲ ಬಿಇಒಗಳ ಗಮನಕ್ಕೆ ತಂದಿದ್ದೇವೆ. –
ದೊಡ್ಡಬಸಪ್ಪ ನೀರಲಕೇರಿ, ಡಿಡಿಪಿಐ