Advertisement

ಗಡಿನಾಡಲ್ಲಿ ಪೊಲೀಸರ ಹದ್ದಿನ ಕಣ್ಣು

11:56 AM Mar 31, 2019 | Naveen |

ಜಾಲ್ಸೂರು : ಗ್ರಾಮೀಣ ಪ್ರದೇಶಗಳಲ್ಲಿ ಚುನಾವಣಾ ಬಿಸಿ ಏರುತ್ತಿದ್ದಂತೆ ಗಡಿ ಭಾಗದಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ತೀವ್ರ ತಪಾಸಣೆ ನಡೆಸಲಾಗುತ್ತಿದ್ದು, ವಾಹನ ಸಂಚಾರದ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ.

Advertisement

ಜಾಲ್ಸೂರಿನಲ್ಲಿ ಪ್ರತ್ಯೇಕ ಚೆಕ್‌ಪೋಸ್ಟ್‌ ನಿರ್ಮಿಸಿ ವಾಹನ ಸಂಚಾರದ ಮೇಲೆ ಸಂಪೂರ್ಣ ನಿಗಾ ಇರಿಸಲಾಗಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಗಡಿ ಪ್ರದೇಶದಲ್ಲಿ ತಾತ್ಕಾಲಿಕ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಈ ಭಾಗದಲ್ಲಿ ಓಡಾಡುವ ವಾಹನಗಳನ್ನು ತಪಾಸಣೆಗೆ ಒಳಪಡಿಸುತ್ತಿದ್ದಾರೆ.

ಹಾಗೆಯೇ ಸುಳ್ಯ-ಕಾಸರಗೋಡು ಮಾರ್ಗವಾದ ಜಾಲ್ಸೂರಿನಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಲಾಗಿದ್ದು, ಎಲ್ಲ ವಾಹನಗಳನ್ನು ಅಧಿಕಾರಿಗಳು ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಜಾಲ್ಸೂರು ಗಡಿಭಾಗವಾದ ಕಾರಣ ಇಲ್ಲಿ ಪೊಲೀಸರು ಸೂಕ್ಷ್ಮವಾಗಿ ನಿಗಾ ಇರಿಸಿದ್ದಾರೆ. ಈ ಭಾಗದಲ್ಲಿ ಮೊದಲಿನಿಂದಲೇ ಪೊಲೀಸ್‌ ತಪಾಸಣೆ ನಡೆಸಲಾಗುತ್ತಿತ್ತು. ಚುನಾವಣ ನೀತಿ ಸಂಹಿತೆ ಜಾರಿಯಾದ ಅನಂತರ ಪ್ರತ್ಯೇಕ ಚೆಕ್‌ಪೋಸ್ಟ್‌ ನಿರ್ಮಿಸಲಾಗಿದೆ. ಚುನಾವಣೆಗೆ ಸಂಬಂಧಪಟ್ಟು ರಾಜ್ಯಕ್ಕೆ ಅನ್ಯ ರಾಜ್ಯಗಳಿಂದ ಹಣ ಹಾಗೂ ಇತರ ವಸ್ತುಗಳ ಅಕ್ರಮ ಸಾಗಾಟ ತಡೆಗಟ್ಟಲು ಅಧಿಕಾರಿಗಳು ಕಾರ್ಯ ಪ್ರವರ್ತರಾಗಿದ್ದಾರೆ.

ಸಿಸಿ ಕೆಮರಾ ಅಳವಡಿಕೆ
ಗಡಿಭಾಗದ ವಾಹನಗಳ ಮೇಲೆ ಕಟ್ಟೆಚ್ಚರ ಇಡಲು ಜಾಲ್ಸೂರಿನ ಚೆಕ್‌ಪೋಸ್ಟ್‌ನಲ್ಲಿ ಎರಡು ಸಿ.ಸಿ. ಟಿವಿ ಕೆಮರಾ ಅಳವಡಿಸಲಾಗಿದೆ. ಕೇರಳ ಭಾಗದಿಂದ ಬರುವ ಹಾಗೂ ಕೇರಳ ಮುದ್ರಿತ ನಂಬರ್‌ ಹೊಂದಿರುವ ವಾಹನಗಳನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಪೊಲೀಸ್‌ ಇಲಾಖೆ ಅಳವಡಿಸಿರುವ ಸಿಸಿ ಕೆಮರಾ ದಿನದ 24 ಗಂಟೆಯೂ ಕಾರ್ಯಾಚರಿಸುತ್ತಿದ್ದು, ಎಲ್ಲ ವಾಹನಗಳ ಮೇಲೆ ನಿಗಾ ಇಡುತ್ತಿದೆ. ರಾತ್ರಿ, ಹಗಲೆನ್ನದೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಪ್ರತ್ಯೇಕ ತಂಡ ಗಳನ್ನು ರಚಿಸಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಹೆದರುವ ಅಗತ್ಯವಿಲ್ಲ
ಚೆಕ್‌ಪೋಸ್ಟ್‌ ಇರುವ ಕಾರಣ ಜಾಲ್ಸೂರಿನ ಗಡಿಭಾಗ ಪ್ರದೇಶಗಳಾದ ಪಂಜಿಕಲ್ಲು, ಬನಾರಿ, ಬೆಳ್ಳಿಪ್ಪಾಡಿ ದೇಲಂಪಾಡಿ ನಿವಾಸಿಗಳು ಕೃಷಿ ಉತ್ಪನ್ನಗಳು ಹಾಗೂ ಇನ್ನಿತರ ವಸ್ತುಗಳನ್ನು ಜೀಪು ಹಾಗೂ ಬೇರೆ ವಾಹನಗಳಲ್ಲಿ ಕೊಂಡೊಯ್ಯುವುದಕ್ಕೆ ಹಿಂಜರಿಯುತ್ತಿದ್ದಾರೆ. ತಪಾಸಣೆಗೆ ಭಯಪಡುವುದು ಬೇಡ. ಇದು ಚುನಾವಣೆಗೆ ಸಂಬಂಧಪಟ್ಟು ನಡೆಸುವ ಸಹಜ ತಪಾಸಣೆಯಾಗಿದೆ. ಜನಸಮಾನ್ಯರು ಹೆದರುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

ಅಕ್ರಮ ಪತ್ತೆಯಾಗಿಲ್ಲ
ಚುನಾವಣ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಸಂಚರಿಸುವ ಎಲ್ಲ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಸಾರ್ವಜನಿಕರು ಸಹಕರಿಸಬೇಕು. ಇಲ್ಲಿಯವರೆಗೆ ಯಾವುದೇ ವಾಹನಗಳಲ್ಲಿ ಅಕ್ರಮ ಸಾಗಾಟ ಪ್ರಕರಣಗಳು ಇಲ್ಲಿ ಪತ್ತೆಯಾಗಿಲ್ಲ.
-ರಾಧಾಕೃಷ್ಣ, ಅಧಿಕಾರಿ
ಜಾಲ್ಸೂರು ಚೆಕ್‌ಪೋಸ್ಟ್‌

ಶಿವಪ್ರಸಾದ್‌ ಮಣಿಯೂರು

Advertisement

Udayavani is now on Telegram. Click here to join our channel and stay updated with the latest news.

Next