ಮೈಸೂರು: ಐಎಂಎ ವಂಚನೆ ಪ್ರಕರಣ ಸಂಬಂಧ ಮೈಸೂರಿನ ಹಣ ಕಳೆದುಕೊಂಡ ಸಂತ್ರಸ್ತರು ದೂರು ನೀಡಲು ನಗರ ಪೊಲೀಸರು ಪ್ರತ್ಯೇಕ ಕೇಂದ್ರಗಳನ್ನು ತೆರೆದಿದ್ದಾರೆ. ಬುಧವಾರ ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಅವರು ವಂಚನೆಗೀಡಾದವರು ತಮ್ಮ ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೇ ದೂರು ನೀಡಲು ಅವಕಾಶ ಕಲ್ಪಿಸಿದ್ದರು. ಆದರೆ, ಮೊದಲ ದಿನವೇ ಉದಯಗಿರಿ, ಮಂಡಿ ಮತ್ತು ಕೆ.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 20 ದೂರುಗಳು ದಾಖಲಾಗಿದ್ದವು. ಮೈಸೂರಿನಲ್ಲಿಯೂ ದೂರು ಸ್ವೀಕರಿಸಲಾಗುತ್ತಿದೆ ಎಂಬುದನ್ನು ತಿಳಿದ ವಂಚನೆಗೀಡಾದವರು ದೂರು ನೀಡಲು ಮುಂಜಾನೆಯೇ ಪೊಲೀಸ್ ಠಾಣೆಗಳತ್ತ ಧಾವಿಸ ತೊಡಗಿದ್ದರು.
ವಂಚಕ ಮನ್ಸೂರ್ ಹುಟ್ಟೂರು ಗರ್ಗೆಶ್ವರಿಯಲ್ಲಿ ಹೆಚ್ಚು ಹೂಡಿಕೆ?
ಮನ್ಸೂರ್ ಅಲಿಖಾನ್‌ನ ಹುಟ್ಟುರಾದ ತಿ.ನರಸೀಪುರದ ಗರ್ಗೆಶ್ವರಿಯಲ್ಲಿ ಅತಿ ಹೆಚ್ಚು ಮಂದಿ ಹಣ ಹೂಡಿಕೆ ಮಾಡಿರುವ ಬಗ್ಗೆ ಸುದ್ದಿ ಇದ್ದು, ಇದುವರೆಗೂ ಯಾರು ಕೂಡ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿಲ್ಲ. ಜತೆಗೆ ಜಿಲ್ಲೆಯ ಯಾವ ಪೊಲೀಸ್ ಠಾಣೆಗಳಲ್ಲಿ ಹಣ ಕಳೆದುಕೊಂಡವರು ದೂರು ನೀಡಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉದಯವಾಣಿಗೆ ತಿಳಿಸಿದ್ದಾರೆ