Advertisement

ಪ್ರತ್ಯೇಕ ಪ್ರಕರಣ: ನಗದು, ಚಿನ್ನಾಭರಣ ಕಳವು

12:22 PM Jun 23, 2018 | |

ಮೈಸೂರು: ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಬೀಗ ತೆಗೆದು ಒಳನುಗ್ಗಿರುವ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ನಗರದ ಸಿದ್ದಲಿಂಗೇಶ್ವರ ಬಡಾವಣೆ ನಿವಾಸಿ ಚಂದ್ರಶೇಖರ್‌ ಮನೆಯಲ್ಲಿ ಈ ಘಟನೆ ನಡೆದಿದ್ದು, ಕಳ್ಳರು ಮನೆಯಲ್ಲಿದ್ದ 80 ಸಾವಿರ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. 

Advertisement

ಮನೆ ಮಾಲಿಕ ಚಂದ್ರಶೇಖರ್‌ ಬುಧವಾರ ಸಂಜೆ 5 ಗಂಟೆ ಸಮಯದಲ್ಲಿ ಕೆಲಸದ ನಿಮಿತ್ತ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದರು. ಇದನ್ನು ಹೊಂಚು ಹಾಕಿ ಕಳ್ಳತನ ನಡೆಸಿರುವ ಕಳ್ಳರು ಬೀರುವಿನ ಲಾಕರ್‌ನಲ್ಲಿಟ್ಟಿದ್ದ 25 ಗ್ರಾಂ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ಚಂದ್ರಶೇಖರ್‌ ಗುರುವಾರ ಮಧ್ಯಾಹ್ನ ಮನೆಗೆ ಬಂದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ನಗದು ಅಪಹರಣ: ಮನೆ ಬಾಗಿಲು ತೆಗೆದು ಒಳನುಗ್ಗಿರುವ ಕಳ್ಳರು 5 ಸಾವಿರ ರೂ. ನಗದು ದೋಚಿ ಪರಾರಿಯಾಗಿರುವ ಘಟನೆ ಮೈಸೂರು ನಗರದ ವಾಯುದಳದ ಸಿವಿಲಿಯನ್‌ ವಸತಿಗೃಹದಲ್ಲಿ ನಡೆದಿದೆ. ವಾಯುದಳ ಕಚೇರಿ ನೌಕರ ಮಂಜುನಾಥ ಮನೆಯಲ್ಲಿ ಕಳ್ಳತನ ನಡೆದಿದ್ದು, ಹೆಂಡತಿ ಹಾಗೂ ಮಕ್ಕಳು ಹುಬ್ಬಳ್ಳಿಗೆ ಹೋಗಿದ್ದರಿಂದ ಮನೆಗೆ ಬೀಗ ಹಾಕಿಕೊಂಡು, ಜನತಾನಗರದಲ್ಲಿ ವಾಸವಾಗಿರುವ ತಮ್ಮ ತಂದೆ-ತಾಯಿ ಮನೆಗೆ ತೆರಳಿದ್ದರು. ಮರುದಿನ ಬೆಳಗ್ಗೆ ವಸತಿ ಗೃಹಕ್ಕೆ ಬಂದಾಗ ಬೀರುವಿನಲ್ಲಿದ್ದ 5 ಸಾವಿರ ರೂ. ಕಳುವಾಗಿರುವುದು ಕಂಡುಬಂದಿದೆ. ನಜರಬಾದ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬೆಳ್ಳಿ ವಸ್ತು ಕಳವು ಯತ್ನ: ಸಮಾರಂಭಕ್ಕೆಂದು ತಂದಿದ್ದ ಬೆಳ್ಳಿ ವಸ್ತುಗಳನ್ನು ಕಳವು ಮಾಡಲು ಯತ್ನಿಸಿ, ಮಹಿಳೆಯೊಬ್ಬರು ಪೊಲೀಸರ ಅತಿಥಿಯಾಗಿರುವ ಘಟನೆ ನಗರದ ಲಕ್ಷ್ಮಿಪುರಂ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೈಸೂರು ನಗರದ ಹೊಯ್ಸಳ ಕರ್ನಾಟಕ ಸಭಾಭವನದಲ್ಲಿ ಶುಕ್ರವಾರ ಉಪನಯನ ಕಾರ್ಯಕ್ರಮ ನಡೆಯುತ್ತಿತ್ತು.

ಈ ವೇಳೆ ಸ್ಥಳಕ್ಕೆ ಬಂದ ಶಾಂತಮ್ಮ(50) ಎಂಬಾಕೆ ಅಲ್ಲಿದ್ದ ಬೆಳ್ಳಿ ಪದಾರ್ಥಗಳನ್ನು ತಮ್ಮ ಚೀಲಕ್ಕೆ ತುಂಬಿಸಿಕೊಂಡು ಪರಾರಿಯಾಗಲು ಯತ್ನಿಸುತ್ತಿದ್ದಳು. ಅಷ್ಟರಲ್ಲೇ ಮಹಿಳೆಯ ವರ್ತನೆಯಿಂದ ಅನುಮಾನಗೊಂಡ ಕೆಲವರು, ಆಕೆಯ ಪೂರ್ವಾಪರ ವಿಚಾರಿಸಲು ಆರಂಭಿಸಿದ್ದಾರೆ. ಇದರಿಂದ ವಿಚಲಿತಗೊಂಡ ಮಹಿಳೆ ಸೂಕ್ತ ಉತ್ತರ ನೀಡದೆ ತಡಬಡಾಯಿಸಿದ್ದಾಳೆ. 

Advertisement

ಇದರಿಂದ ಕಾರ್ಯಕ್ರಮ ಆಯೋಜಕರು ಲಕ್ಷಿಪುರಂ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಆಕೆಯ ವಿಚಾರಣೆ ನಡೆಸಿ, ಆಕೆಯ ಬಳಿಯಿದ್ದ ಚೀಲವನ್ನು ಪರಿಶೀಲಿಸಿದಾಗ ಬೆಳ್ಳಿ ಪದಾರ್ಥಗಳು ಕಂಡುಬಂದಿದೆ. ಇದರಿಂದಾಗಿ ಆಕೆಯನ್ನು ವಶಕ್ಕೆ ಪಡೆದ ಲಕ್ಷಿಪುರಂ ಠಾಣೆ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ಆಕೆಯನ್ನು ಠಾಣೆಗೆ ಕರೆದೊಯ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next