Advertisement

ಮಳೆ ಹಾನಿಗೆ ಕ್ಷೇತ್ರವಾರು ಪ್ರತ್ಯೇಕ ಸಭೆ

12:52 PM Aug 15, 2020 | Suhan S |

ಮೈಸೂರು: ಜಿಲ್ಲೆಯ ನೆರ ಸಂತ್ರಸ್ತ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಕ್ಷೇತ್ರವಾರು ಪ್ರತ್ಯೇಕ ಸಭೆಗಳನ್ನು ಮಾಡಿ, ಆಯಾ ಶಾಸಕರನ್ನೊಳಗೊಂಡು ಸಭೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

Advertisement

ಮಳೆ ಹಾಗೂ ಪ್ರವಾಹದಿಂದಾಗಿ ಉಂಟಾಗಿರುವ ಹಾನಿ, ಕೈಗೊಂಡಿರುವ ಕ್ರಮಗಳು ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿ, ಕಳೆದ ವರ್ಷ ಹಾಗೂ ಈ ಬಾರಿ ಎಲ್ಲೆಲ್ಲಿ ಹಾನಿಯಾಗಿದೆ ಎಂಬ ಬಗ್ಗೆ ಮುಂದಿನ ವಾರ ಪ್ರತಿ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇವೆ. ಶಾಶ್ವತ ಪರಿಹಾರಕ್ಕಾಗಿ ಆಗ್ರಹಗಳು ಕೇಳಿಬರುತ್ತಿದ್ದು, ಆಯಾ ಕ್ಷೇತ್ರದಲ್ಲಿಯೇ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಈ ಬಗ್ಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಿ ಎಂದು ಡೀಸಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಇನ್ನು ಹಾನಿ ಬಗ್ಗೆ ಸಂಪೂರ್ಣ ಲೆಕ್ಕಾಚಾರ ಆಗಿಲ್ಲ. ಈ ಬಗ್ಗೆ ಪರಿಶೀಲನೆ ಆಗುತ್ತಿದೆ. ಕಳೆದ ಬಾರಿ ಹಾನಿಗೊಳಗಾಗಿ ಪರಿಹಾರ ಸಿಗದವರ ಬಗ್ಗೆ ಮಾಹಿತಿ ಬಂದಿದೆ. ಅವರಿಗೆ ಪರಿಹಾರ ಕಲ್ಪಿಸಲು ಡೀಸಿಗೆ ಸೂಚನೆ ನೀಡಲಾಗಿದೆ. ಮುಂದೆ ಹೀಗೆ ಆಗದಂತೆ ನೋಡಿಕೊಳ್ಳಲೂ ಸೂಚಿಸಲಾಗಿದೆ ಎಂದರು.

ಜಿಲ್ಲಾಡಳಿತ ಸಿದ್ಧ: ಪ್ರವಾಹಪೀಡಿತ ಪ್ರದೇಶಗಳ ಸಂತ್ರಸ್ತ ರೈತರನ್ನು ಶಾಶ್ವತವಾಗಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಕ್ಕೆ ಜಿಲ್ಲಾಡಳಿತ ಸಿದ್ಧವಿದೆ. ಜನ ಒಪ್ಪುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಆಯಾ ಕ್ಷೇತ್ರದ ಜನಪ್ರತಿನಿಧಿಗಳ ಸಹಕಾರವೂ ಅಷ್ಟೇ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಭೆ ಕರೆದ ವೇಳೆ ಕ್ರಮ ವಹಿಸಲಾಗುವುದು ಎಂದರು. ಜಿಲ್ಲೆಯ ಜಲಾಶಯಗಳ ಸ್ಥಿತಿಗತಿಗಳು, ಜಲಾಶಯಗಳ ತೀರದ ಪ್ರದೇಶಗಳ ಸಮಸ್ಯೆ, ಜೀವಹಾನಿ, ಮನೆ ಹಾನಿ, ಬೆಳೆ ಹಾನಿ, ಪ್ರಾಣಿ ಹಾನಿ, ಮಳೆ-ಗಾಳಿಗೆ ವಿದ್ಯುತ್‌ ಪರಿಕರಗಳ ಹಾನಿಯ ವಿವರ, ಪ್ರವಾಹಕ್ಕೊಳಗಾಗಿ ತೊಂದರೆಗೀಡಾದ ಗ್ರಾಮಗಳು ಸೇರಿದಂತೆ ಮುಂತಾದ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಜನ ಒಪ್ಪಿದರೆ ಜಾಗ ನೀಡುತ್ತೇವೆ: ಮೂರು ವರ್ಷಗಳಿಂದ ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದು, ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂಬ ಬಗ್ಗೆ ವಿಧಾನಪರಿಷತ್‌ ಸದಸ್ಯರಾದ ಎಚ್‌. ವಿಶ್ವನಾಥ್‌ ಪ್ರಶ್ನೆ ಮಾಡಿದರು.

Advertisement

ಇದಕ್ಕೆ ಪ್ರತಿಕ್ರಿಯೆ ನೀಡಿದ ಡೀಸಿ ಅಭಿರಾಂ ಜಿ. ಶಂಕರ್‌, ಮಳೆಗಾಲದಲ್ಲಿ ನೀರು ನುಗ್ಗುವ ಭಾಗಗಳಲ್ಲಿ ಸ್ಥಳಾಂತರ ಮಾಡಲಾಗುತ್ತಿದೆ. ಈ ಪ್ರದೇಶದವರನ್ನು ಸ್ಥಳಾಂತರ ಮಾಡಲು ಜಾಗ ನೀಡಲು ಜಿಲ್ಲಾಡಳಿತ ಸಿದ್ಧವಿದ್ದರೂ ಸಾರ್ವಜನಿಕರು ಒಪ್ಪುತ್ತಿಲ್ಲ. ಜನ ಒಪ್ಪಿದರೆ ನಾವು ಜಾಗ ಕೊಡುತ್ತೇವೆ. ನಂಜನಗೂಡಲ್ಲಿ ಪ್ರವಾಹದ ನೀರು ನುಗ್ಗುವ ಸಮಸ್ಯೆ ಬಹಳವೇ ಇದ್ದು, ನಗರದ ಹೊರ ವಲಯದಲ್ಲಿ ಜಾಗ ಕೊಟ್ಟರೆ ಒಪ್ಪುತ್ತಿಲ್ಲ ಎಂದು ಹೇಳಿದರು. 30 ಕೋಟಿ ರೂ. ಅನುದಾನ ಬಂದಿದ್ದು, ಅದರಲ್ಲಿ 14 ಕೋಟಿ 14 ಲಕ್ಷ ರೂ. ನಿಗಮಕ್ಕೆ ಬಿಡುಗಡೆ ಮಾಡಿದ್ದು, ಇನ್ನೂ 16 ಕೋಟಿ ರೂ. ಜಿಲ್ಲಾಡಳಿತ ಬಳಿ ಇದೆ. ಅಗತ್ಯ ಇರುವ ಕಡೆ ಅನುದಾನ ನೀಡಲಾಗುತ್ತಿದೆ ಎಂದು ಡೀಸಿ ಮಾಹಿತಿ ನೀಡಿದರು.

ಸಭೆಯಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಅಶ್ವಿ‌ನ್‌ ಕುಮಾರ್‌, ಹರ್ಷವರ್ಧನ್‌, ಎಚ್‌.ಪಿ. ಮಂಜುನಾಥ್‌ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next