Advertisement

ಪ್ರತಿಭಟನೆಗೆ “ಫ್ರೀಡಂ ಪಾರ್ಕ್‌’ಮಾದರಿಯಲ್ಲಿ ನಗರದಲ್ಲಿ ಪ್ರತ್ಯೇಕ ಜಾಗ ಗುರುತು

10:51 PM Mar 15, 2021 | Team Udayavani |

ಮಹಾನಗರ: ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಫ್ರೀಡಂಪಾರ್ಕ್‌ನಲ್ಲಿ ಅವಕಾಶ ನೀಡಿದ ಮಾದರಿಯಲ್ಲಿಯೇ ಮಂಗಳೂರಿನ ಲ್ಲಿಯೂ ಪ್ರತಿಭಟನೆ ನಡೆಸುವುದಕ್ಕಾಗಿಯೇ ಪ್ರತ್ಯೇಕ ಜಾಗ ನಿಗದಿ ಮಾಡಲು ದ.ಕ. ಜಿಲ್ಲಾಡಳಿತ ನಿರ್ಧರಿಸಿದೆ.
ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗದಂತೆ ನಗರದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡುವ ಇರಾದೆಯಿಂದ ಸೂಕ್ತ ಸ್ಥಳದ ಬಗ್ಗೆ ಪರಾಮರ್ಶೆ ನಡೆಸಲು ಜಿಲ್ಲಾಡಳಿತ ಸಂಕಲ್ಪಿಸಿದ್ದು ಇದಕ್ಕಾಗಿ ನಗರ ಪೊಲೀಸ್‌ ಇಲಾಖೆ ಹಾಗೂ ಮಂಗಳೂರು ಪಾಲಿಕೆಯ ಜತೆಗೆ ಮಹತ್ವದ ಸಭೆ ಶೀಘ್ರ ನಡೆಯಲಿದೆ.

Advertisement

ಮೂಲಗಳ ಪ್ರಕಾರ, ಕದ್ರಿ ಉದ್ಯಾನ ವನದ ಸಮೀಪದಲ್ಲಿ ಸೂಕ್ತ ಜಾಗವನ್ನು ಪರಿಶೀಲಿಸಿ ಅಲ್ಲಿ ಪ್ರತಿಭಟನೆಗಳಿಗೆ ಅವಕಾಶ ನೀಡುವ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ. ಇದಕ್ಕಾಗಿ ಅದೇ ಪರಿಸರದಲ್ಲಿ ಗಾಂಧೀ ಪ್ರತಿಮೆಯೊಂದನ್ನು ಸ್ಥಾಪಿಸಿ ಪ್ರತಿಭಟನಾ ನಿರತರಿಗೆ ಸೂಕ್ತ ಸ್ಥಳಾವಕಾಶ ನೀಡುವ ಬಗ್ಗೆಯೂ ಯೋಚಿಸಲಾಗಿದೆ. ಇದರ ಜತೆಗೆ ನಗರದಲ್ಲಿ ಸೂಕ್ತವೆನಿಸುವ ಇತರ ಸ್ಥಳದ ಬಗ್ಗೆಯೂ ಹುಡುಕಾಟ ನಡೆಸಲಾಗುತ್ತಿದೆ.

ಸ್ಟೇಟ್‌ಬ್ಯಾಂಕ್‌ನಲ್ಲಿರುವ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಗಳಿಗೆ ಅವಕಾಶ ನೀಡಲಾ ಗುತ್ತಿತ್ತು. ಆದರೆ, ಕೊರೊನಾ ಲಾಕ್‌ಡೌನ್‌ ಬಳಿಕ ಪ್ರತಿಭಟನ ಸ್ಥಳ ಏಕಾಏಕಿ ಮಿನಿ ವಿಧಾನಸೌಧದ ಮುಂಭಾಗಕ್ಕೆ ಬದಲಾವಣೆ ಆಗಿದೆ. ಸದ್ಯ ಇಲ್ಲಿ ಪಾರ್ಕಿಂಗ್‌-ವಾಹನ ಸಂಚಾರ ಸಮಸ್ಯೆ ಇರುವುದರಿಂದ ಪ್ರತಿಭಟನೆಗೆ ಇಲ್ಲಿ ಅವಕಾಶ ನೀಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಜಿಲ್ಲಾಡಳಿತದಲ್ಲಿ ವ್ಯಕ್ತವಾಗಿದೆ. ಹೀಗಾಗಿ ಪುರಭವನದ ಮುಂಭಾಗದಲ್ಲಿರುವ ಪಾರ್ಕ್‌ನ ಗಾಂಧೀ ಪ್ರತಿಮೆ ಬಳಿಯಲ್ಲಿ ಪ್ರತಿಭಟನೆಗೆ ತಾತ್ಕಾಲಿಕವಾಗಿ ಅವಕಾಶ ನೀಡುವ ಬಗ್ಗೆಯೂ ಪೊಲೀಸ್‌ ಇಲಾಖೆ ಚರ್ಚಿಸುತ್ತಿದೆ.

ಜಿಲ್ಲಾಡಳಿತದಿಂದ ಸೂಕ್ತ ಕ್ರಮ
ಈ ಬಗ್ಗೆ ಮಂಗಳೂರು ತಹಶೀಲ್ದಾರ್‌ ಗುರುಪ್ರಸಾದ್‌ “ಸುದಿನ’ ಜತೆಗೆ ಮಾತನಾಡಿ, “ಸ್ಮಾರ್ಟ್‌ಸಿಟಿ ಕಾಮಗಾರಿ ನಡೆಯುತ್ತಿದ್ದ ಸಂದರ್ಭ ಮಿನಿ ವಿಧಾನಸೌಧ ಮುಂಭಾಗದ ವ್ಯಾಪ್ತಿಯಲ್ಲಿ ವಾಹನ ಸಂಚಾರ ಕಡಿಮೆಯಿದ್ದ ಕಾರಣ ಪ್ರತಿಭಟನೆಗಳು ಇಲ್ಲಿ ನಡೆಯುತ್ತಿತ್ತು. ಆದರೆ ಪ್ರತಿಭಟನೆಗೆ ಇದು ಅಧಿಕೃತ ಸ್ಥಳವಲ್ಲ. ಇದೀಗ ವಾಹನ ಸಂಚಾರ ಹಾಗೂ ಜನ ಸಂಚಾರ ಈ ವ್ಯಾಪ್ತಿಯಲ್ಲಿ ಅಧಿಕವಾಗುತ್ತಿರುವ ಕಾರಣದಿಂದ ಪ್ರತಿಭಟನೆಗೆ ಸೂಕ್ತ ಪರ್ಯಾಯ ವ್ಯವಸ್ಥೆಯ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ’ ಎಂದರು.

ಪಡೀಲ್‌ಗೆ ಅನುಮಾನ?
ಸುದೀರ್ಘ‌ ವರ್ಷದಿಂದ ಸ್ಟೇಟ್‌ಬ್ಯಾಂಕ್‌ನ ಜಿಲ್ಲಾಧಿಕಾರಿ ಕಚೇರಿ ಬಳಿಯ ಗೇಟ್‌ ಮುಂಭಾಗ ಪ್ರತಿಭಟನೆ ನಡೆಸಲಾಗುತ್ತಿತ್ತು. ಇದೇ ಜಾಗವನ್ನು ಪ್ರತಿಭಟನೆಗೆಂದು ಮೀಸಲು ಇರಿಸಲಾಗಿತ್ತು. ನಿರಂತರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಹಾಗೂ ಕಚೇರಿ ಉದ್ಯೋಗಿಗಳಿಗೆ, ಸಂಚಾರ ವ್ಯವಸ್ಥೆಗೆ ಸಮಸ್ಯೆ ಎದುರಾಗುತ್ತಿತ್ತು. ಬೃಹತ್‌ ಪ್ರತಿಭಟನೆ ವೇಳೆ ರಸ್ತೆಯೇ ಬಂದ್‌ ಮಾಡಬೇಕಾಗುತ್ತಿತ್ತು. ಈ ಬವಣೆಯಿಂದ ಮುಕ್ತಿ ನೀಡಲು ಪ್ರತಿಭಟನಾ ಸ್ಥಳವನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಚಿಂತನೆ ನಡೆಸಲಾಗಿತ್ತು.

Advertisement

ನೆಹರೂ ಮೈದಾನದಲ್ಲಿ ಅವಕಾಶ; ಕ್ರೀಡಾಳುಗಳ ವಿರೋಧ ಆದರೆ ಕೊರೊನಾ ಬಳಿಕ ಇದನ್ನು ತಾತ್ಕಾಲಿಕವಾಗಿ ಮಿನಿವಿಧಾನಸೌಧದ ಮುಂಭಾಗಕ್ಕೆ ಸ್ಥಳಾಂತರಿಸಲಾಗಿದೆ. ಮುಂದೆ ಪಡೀಲ್‌ನಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣವಾದ ಬಳಿಕ ಅಲ್ಲಿನ ಸೂಕ್ತ ಸ್ಥಳಕ್ಕೆ ಪ್ರತಿಭಟನೆ ಸ್ಥಳಾಂತರ ಮಾಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆದರೆ, ಸದ್ಯದ ಮಾಹಿತಿ ಪ್ರಕಾರ ಅಲ್ಲಿನ ಸಂಕೀರ್ಣದ ಹೊರಭಾಗದಲ್ಲಿ ರಸ್ತೆ-ಇಕ್ಕಟ್ಟಿನ ಪರಿಸ್ಥಿತಿ ಇರುವ ಕಾರಣದಿಂದ ಅವಕಾಶ ಬಹುತೇಕ ಕಷ್ಟಸಾಧ್ಯ ಎನ್ನಲಾಗುತ್ತಿದೆ. ಈ ಮಧ್ಯೆ ನೆಹರೂ ಮೈದಾನಿನಲ್ಲಿ ಪ್ರತಿಭಟನೆಗೆ ಅವಕಾಶ ನೀಡುವ ಕೋರಿಕೆ ಇದ್ದರೂ, ಕ್ರೀಡಾಪಟುಗಳ ವಿರೋಧವಿರುವ ಕಾರಣದಿಂದ ಇಲ್ಲೂ ಅವಕಾಶ ಸಿಗುವುದು ಅನುಮಾನ.

ಹಿಂದಿನ ಪ್ರಸ್ತಾವಕ್ಕೆ ಮರುಜೀವ
2016ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಎ.ಬಿ. ಇಬ್ರಾಹಿಂ ಅವರು ಪ್ರತಿಭಟನ ಸ್ಥಳವನ್ನು ಬೇರೆ ಕಡೆಗೆ ಸ್ಥಳಾಂತರಿಸುವ ಬಗ್ಗೆ ಉಲ್ಲೇಖೀಸಿದ್ದರು. ನೆಹರೂ ಮೈದಾನಿನ ಕ್ರಿಕೆಟ್‌ ಪೆವಿಲಿಯನ್‌ ಬಳಿಯ ಸಣ್ಣ ಪ್ರದೇಶ, ನೆಹರೂ ಮೈದಾನಿನ ಹಿಂಬದಿಯ ಟೆಂಪೋ ನಿಲುಗಡೆ ಪ್ರದೇಶ, ಸರಕಾರಿ ನೌಕರರ ಸಂಘದ ಸಭಾಭವನ ಪಕ್ಕ, ಜಿಲ್ಲಾಧಿಕಾರಿ ಕಚೇರಿ ಆವರಣದೊಳಗೆ ಹಳೆ ಕ್ಯಾಂಟೀನ್‌ ಜಾಗಗಳ ಪೈಕಿ ಒಂದು ಕಡೆ ಅಂತಿಮಗೊಳಿಸುವ ಬಗ್ಗೆ ಅವರು ತಿಳಿಸಿದ್ದರು. ಆದರೆ ಆ ಪ್ರಸ್ತಾವ ಕಡತದಲ್ಲಿಯೇ ಬಾಕಿಯಾಗಿತ್ತು. ಅನಂತರ 2019ರ ಡಿ. 19ರಂದು ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬಳಿಯಿಂದ ಆರಂಭವಾದ ಪ್ರತಿಭಟನೆಯು ಬಳಿಕ ಗಲಭೆ ಸ್ವರೂಪ ಪಡೆದು ದೇಶವ್ಯಾಪಿ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಭಟನ ಸ್ಥಳವನ್ನೇ ಸ್ಥಳಾಂತರಿಸುವ ಬಗ್ಗೆ ಜಿಲ್ಲಾಡಳಿತ ಚಿಂತನೆ ಆರಂಭಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next