ಮೈಸೂರು: ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆಗೆ ಪ್ರತ್ಯೇಕ ಆ್ಯಪ್ ರೂಪಿಸಿದ್ದೇವೆ. ಆ್ಯಪ್ ಮೂಲಕ ಅರ್ಜಿ ಸಲ್ಲಿಸಲು ಎಲ್ಲಾ ತಯಾರಿ ಮಾಡಿದ್ದೇವೆ. ಜೂನ್ 27 ರಂದು ಸಚಿವ ಸಂಪುಟ ಸಭೆಯಲ್ಲಿ ಸಿಎಂ ಅವರಿಗೆ ಆ್ಯಪ್ ತೋರಿಸುತ್ತೇವೆ. ನಂತರ ಅರ್ಜಿ ಸಲ್ಲಿಕೆಗೆ ಆ್ಯಪ್ ಬಿಡುಗಡೆ ಮಾಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶನಿವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗಸ್ಟ್ 17 ರ ನಂತರದಿಂದ ಫಲಾನುಭವಿಗಳಿಗೆ ಹಣ ಹಾಕುತ್ತೇವೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಇರುವುದಿಲ್ಲ. ಅರ್ಜಿ ಸಲ್ಲಿಕೆಗೆ ಯಾವ ಶುಲ್ಕವೂ ಇರುವುದಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಆ್ಯಪ್ ರಚಿಸಿದ್ದೇವೆ. ಒಂದು ರೂಪಾಯಿ ಹಣವನ್ನು ಅರ್ಜಿ ಸಲ್ಲಿಕೆಗೆ ಕೊಡಬೇಡಿ. ಅರ್ಜಿ ಸಲ್ಲಿಸಿ ಸ್ವೀಕೃತಿ ಪತ್ರ ಸಿಕ್ಕರೆ ಅಲ್ಲಿಗೆ ನೀವು ಫಲಾನುಭವಿ ಪಟ್ಟಿಗೆ ಸೇರುತ್ತೀರಿ. ಇದರಲ್ಲಿ ಯಾವುದೇ ಗೊಂದಲಗಳು ಬೇಡ ಎಂದರು.
ಇದನ್ನೂ ಓದಿ:ನವದೀಪ್ ಸೈನಿಗೆ ಕೈ ತಪ್ಪಿತು ಮೂರು ಕೌಂಟಿ ಪಂದ್ಯ
ಗೃಹ ಲಕ್ಷ್ಮೀ ಯೋಜನೆ ಜಾರಿಗೆ ಹಣಕಾಸಿನ ತೊಂದರೆ ಇದೆ ಎಂಬುದರಲ್ಲಿ ಅರ್ಥವಿಲ್ಲ. ಎಲ್ಲಾ ರೀತಿಯ ಸಂಪನ್ಮೂಲ ನಮ್ಮ ಬಳಿ ಇದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬರಲಿ ಅಂತ ಚಾಮುಂಡಿ ತಾಯಿಯಲ್ಲಿ ಹರಕೆ ಕಟ್ಟಿದ್ದೆ. ದೇವಿ ಮುಂದೆ ಸೆರೆಗೊಡ್ಡಿ ಬೇಡಿಕೊಂಡಿದ್ದೆ. ಈಗ ಅಧಿಕಾರಕ್ಕೆ ಬಂದಿದ್ದೇವೆ. ಹೀಗಾಗಿ ಬೆಟ್ಟಕ್ಕೆ ಬಂದು ಹರಕೆ ತೀರಿಸಿದ್ದೇನೆ. ರಾಜ್ಯದಲ್ಲಿ ಒಳ್ಳೆ ಮಳೆಯಾಗಲಿ ಎಂದು ಈಗ ದೇವಿಯನ್ನು ಬೇಡಿದ್ದೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.