ಹೊಸದಿಲ್ಲಿ/ಚಂಡೀಗಢ: ಕೇಂದ್ರ ಸರಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆ ವಿರುದ್ಧ ಸಿಡಿದು ನಿಂತಿರುವ ಕಾಂಗ್ರೆಸ್, ಪಕ್ಷ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಜಾರಿಗೆ ತರುವ ನಿಟ್ಟಿನಲ್ಲಿ ಮಾದರಿ ಕಾನೂನಿನ ಕರಡು ಸಿದ್ಧಪಡಿಸಿದೆ. ಮೂಲಗಳು ಶುಕ್ರವಾರ ಹೊಸದಿಲ್ಲಿಯಲ್ಲಿ ನೀಡಿದ ಮಾಹಿತಿ ಪ್ರಕಾರ, ಶೀಘ್ರವೇ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಿಗೆ ಅವುಗಳನ್ನು ಕೇಂದ್ರ ಜಾರಿಗೆ ತಂದ ಕಾನೂನುಗಳ ಬದಲಾಗಿ ಅನುಷ್ಠಾನಗೊಳಿಸಲು ಕಳುಹಿಸಿಕೊಡಲಾಗುತ್ತದೆ.
ಸಂವಿಧಾನದ 254 (2) ವಿಧಿಯ ಅನ್ವಯ ರಾಜ್ಯ ಸರಕಾರಗಳಿಗೆ ತಮ್ಮದೇ ಆದ ಕಾನೂನು ರಚಿಸಿ ಜಾರಿಗೊಳಿಸಲು ಅಧಿಕಾರ ಇದೆ. ಅದನ್ನು ಬಳಸಿಕೊಳ್ಳು ವಂತೆ ಈಗಾಗಲೇ ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚನೆ ನೀಡಿದ್ದಾರೆ. ಕಾಂಗ್ರೆಸ್, ಮಿತ್ರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿ ತಮ್ಮದೇ ರೈತ ವಿಮಸೂದೆಗಳನ್ನು ಮಂಡಿಸಿ ಅನುಮೋದನೆ ಪಡೆದುಕೊಳ್ಳಲಿವೆ. ಪಕ್ಷದ ನಾಯಕ ಡಾ|ಅಭಿಷೇಕ್ ಸಿಂಘ್ವಿ ಅದನ್ನು ಸಿದ್ಧಪಡಿಸಿದ್ದಾರೆ.
ಬದಲಾವಣೆ: ರಾಹುಲ್ ಗಾಂಧಿ ಪಂಜಾಬ್ ಮತ್ತು ಹರಿಯಾಣ ಗಳಲ್ಲಿ ಅ.4-6ರ ವರೆಗೆ ಟ್ರ್ಯಾಕ್ಟರ್ ರ್ಯಾಲಿ ನಡೆಸಲಿದ್ದಾರೆ. ಸದ್ಯ ನಿಗದಿಯಾಗಿದ್ದ ಪ್ರಕಾರ ಅ.3-5ರ ವರೆಗೆ ರ್ಯಾಲಿ ನಡೆಯಬೇಕಾಗಿತ್ತು.
ಹೊಸ ಕಾನೂನುಗಳು ದೇಶದ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಬಲ ನೀಡಲಿದೆ. ಮಹಾತ್ಮಾ ಗಾಂಧಿ ಇದ್ದಿದ್ದರೆ ಮೂರೂ ಕಾನೂನುಗಳನ್ನು ನೋಡಿ ಅತಿ ಹೆಚ್ಚು ಸಂತೋಷಪಡುತ್ತಿದ್ದರು.
ಡಾ|ಜಿತೇಂದ್ರ ಸಿಂಗ್, ಪ್ರಧಾನಿ ಕಾರ್ಯಾಲಯದ ಸಹಾಯಕ ಸಚಿವ