Advertisement

ಸೆ. 16ರಿಂದ ಮಂಗಳೂರು ವಿ.ವಿ. ಪದವಿ ಪರೀಕ್ಷೆ: ಗಡಿ ವಿದ್ಯಾರ್ಥಿಗಳಿಗೆ ಹಾಜರಾಗಲು ಸಮಸ್ಯೆ

11:02 PM Sep 12, 2020 | mahesh |

ಪುತ್ತೂರು: ಸೆ. 16ರಿಂದ ಪದವಿ ಪರೀಕ್ಷೆ ಆರಂಭಗೊಳ್ಳಲಿದ್ದು ಕೇರಳ-ಕರ್ನಾಟಕ ನಡುವೆ ಕೆಎಸ್‌ಆರ್‌ಟಿಸಿ ಬಸ್‌ ಓಡಾಟ ಪುನರಾರಂಭಗೊಳ್ಳದ ಕಾರಣ ಗಡಿ ವ್ಯಾಪ್ತಿಯೊಳಗಿನ ಮಂಗಳೂರು ವಿ.ವಿ.ಗೆ ಒಳಪಟ್ಟಿರುವ ವಿದ್ಯಾರ್ಥಿಗಳಿಗೆ ಪದವಿ ಪರೀಕ್ಷೆಗೆ ಹಾಜರಾಗಲು ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಇದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.

Advertisement

150 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು..!
ಪುತ್ತೂರು, ಸುಳ್ಯ ಸಹಿತ ದ.ಕ.ಜಿಲ್ಲೆಯ ವಿವಿಧೆಡೆ ವಿ.ವಿ. ವ್ಯಾಪ್ತಿಗೆ ಒಳಪಟ್ಟಿರುವ ಸರಕಾರಿ, ಖಾಸಗಿ ಪದವಿ ಕಾಲೇಜುಗಳಲ್ಲಿ 150ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಉಭಯ ಜಿಲ್ಲೆಗಳ ಸರಕಾರಿ, ಖಾಸಗಿ ಬಸ್‌ಗಳಲ್ಲಿ ಬಸ್‌ಪಾಸ್‌ ವ್ಯವಸ್ಥೆಯಡಿ ಪ್ರತಿನಿತ್ಯ ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಲಾಕ್‌ಡೌನ್‌ ಅನಂತರ ಬಸ್‌ ಓಡಾಟ ಸ್ಥಗಿತಗೊಂಡ ಬಳಿಕ ಗಡಿ ಬಿಕ್ಕಟ್ಟು ಇತ್ಯರ್ಥ ವಾಗದ ಕಾರಣ ಬಸ್‌ ಓಡಾಟಕ್ಕೆ ಇನ್ನೂ ಗ್ರೀನ್‌ ಸಿಗ್ನಲ್‌ ದೊರೆತಿಲ್ಲ.

ಸೆ.16ರಿಂದ ಪರೀಕ್ಷೆ ಆರಂಭ
ಮಂಗಳೂರು ವಿ.ವಿ.ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಸೆ. 16ರಿಂದ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೆಳಗ್ಗೆ ಪರೀಕ್ಷೆ ಆರಂಭಗೊಳ್ಳಲಿದೆ. ಕೋವಿಡ್‌ ತಪಾಸಣೆ ಕಾರಣದಿಂದ ಬೆಳಗ್ಗೆ 9ಕ್ಕಿಂತ ಮೊದಲೇ ಪರೀಕ್ಷಾ ಕೇಂದ್ರಕ್ಕೆ ತಲಪಲು ಸೂಚನೆ ನೀಡಲಾಗಿದೆ. ಆದರೆ ಬಸ್‌ ಓಡಾಟಕ್ಕೆ ಕೇರಳ ಸರಕಾರ ಒಪ್ಪಿಗೆ ನೀಡದಿರುವ ಕಾರಣ ಗಡಿಭಾಗ ಸಹಿತ ಕಾಸರಗೋಡು ಕಡೆಯಿಂದ ದ.ಕ.ಜಿಲ್ಲೆಯ ಕಾಲೇಜಿನ ಪರೀಕ್ಷಾ ಕೇಂದ್ರಗಳಿಗೆ ತಲುಪುವುದು ಹೇಗೆ ಎಂಬ ಪ್ರಶ್ನೆ ವಿದ್ಯಾರ್ಥಿಗಳಿಗೆ ಎದುರಾಗಿದೆ.

ಸೆ. 21ರ ಅನಂತರ ಒಪ್ಪಿಗೆ..?
ಮಾಹಿತಿ ಪ್ರಕಾರ ಕೇರಳ ಸರಕಾರ ಸೆ. 21ರ ಅನಂತರ ಬಸ್‌ ಓಡಾಟಕ್ಕೆ ಅನುಮತಿ ನೀಡಲಿರುವ ಸಾಧ್ಯತೆ ಇದೆ. ಆದರೆ
ಸೆ.16 ರಿಂದ ಪರೀಕ್ಷೆ ಆರಂಭಗೊಳ್ಳುವ ಕಾರಣ ಸೆ. 21 ರ ತನಕ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಏನು ಎನ್ನುವ ಬಗ್ಗೆ ಗೊಂದಲ ಮೂಡಿದೆ.

ಅನಾರೋಗ್ಯವಿದ್ದರೆ ವಿಶೇಷ ಅವಕಾಶ
ಕೋವಿಡ್ ಸೋಂಕಿನ ಸಮಸ್ಯೆ, ಅನಾರೋಗ್ಯದಿಂದ ಪರೀಕ್ಷೆ ಬರೆಯಲು ಸಾಧ್ಯವಿಲ್ಲದವರಿಗೆ ಮುಂದಿನ ದಿನಗಳಲ್ಲಿ ವಿಶೇಷ ಪರೀಕ್ಷೆ ನಡೆಸಲು ವಿ.ವಿ. ನಿರ್ಧರಿಸಿದೆ. ಆದರೆ ಗಡಿ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಸಂಬಂಧಿಸಿ ಯಾವುದೇ ಸೂಚನೆ ನಮಗೆ ಬಂದಿಲ್ಲ. ಹೊರ ರಾಜ್ಯದವರು ವಾಹನ ವ್ಯವಸ್ಥೆ ಇಲ್ಲದೇ ಗೈರುಹಾಜರಾದರೆ ವಿಶೇಷ ಪರೀಕ್ಷೆ ಅವರಿಗೆ ಅನ್ವಯವಾಗಲಿದೆಯೇ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ.
ಎಸೆಸೆಲ್ಸಿ, ಪಿಯುಸಿ ಮಾದರಿಯಲ್ಲಿ ಗಡಿ ಭಾಗದ ವಿದ್ಯಾರ್ಥಿಗಳನ್ನು ಕರೆತರುವ ವ್ಯವಸ್ಥೆಯಾದರೆ ಉತ್ತಮ ಎಂದು ಸುಳ್ಯ ಕಾಲೇಜೊಂದರ ಪ್ರಾಂಶುಪಾಲರು ಅಭಿಪ್ರಾಯಪಟ್ಟಿದ್ದಾರೆ.

Advertisement

ಗಮನಕ್ಕೆ ಬಂದಿದೆ
ಸಂಚಾರ ಸಮಸ್ಯೆ ಗಮನಕ್ಕೆ ಬಂದಿದೆ. ಕೇರಳದ ಅನುಮತಿ ಸಿಗದೆ ನಾವು ಗಡಿ ದಾಟಿ ಬಸ್‌ ಓಡಿಸಲು ಸಾಧ್ಯವಿಲ್ಲ. ಕರ್ನಾಟಕದ ಗಡಿ ತನಕ ಸಂಚರಿಸಬಹುದಷ್ಟೇ. ಅಲ್ಲಿಗೆ ಬಂದು ವಿದ್ಯಾರ್ಥಿಗಳು ಬಸ್‌ ಮೂಲಕ ಪ್ರಯಾಣಿಸಬಹುದು. ಲಭ್ಯ ಮಾಹಿತಿ ಪ್ರಕಾರ ಸೆ. 21ರಿಂದ ಬಸ್‌ ಓಡಾಟಕ್ಕೆ ಅನುಮತಿ ಸಿಗಲಿದೆ.
-ನಾಗೇಂದ್ರ ವಿಭಾಗ ನಿಯಂತ್ರಣಾಧಿಕಾರಿ, ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗ

ನಾನು ಕೇರಳ ವ್ಯಾಪ್ತಿಯ ದೇಲಂಪಾಡಿ ನಿವಾಸಿ. ಈ ಹಿಂದೆ ಬೆಳಗ್ಗೆ 7ಕ್ಕೆ ಪುತ್ತೂರಿಗೆ ಬಸ್‌ ಇತ್ತು. ಪುತ್ತೂರಿನ ಕಾಲೇಜಿಗೆ ಆ ಬಸ್‌ನಲ್ಲೇ ಬರುತ್ತಿದ್ದೆ. ಸೆ. 16ರಿಂದ ಪರೀಕ್ಷೆ ಆರಂಭಗೊಳ್ಳಲಿದೆ. ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ಸಂಚಾರ ಹೇಗೆ ಅನ್ನುವುದೇ ಆತಂಕ.
ಪೂಜಾಶ್ರೀ ಅಂತಿಮ ಪದವಿ ವಿದ್ಯಾರ್ಥಿನಿ

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next