Advertisement

SEP ರಚನೆಯಿಂದ ಹಿಂದೆ ಸರಿಯುವುದಿಲ್ಲ: ಮಧು ಬಂಗಾರಪ್ಪ

11:47 PM Dec 07, 2023 | Team Udayavani |

ಬೆಳಗಾವಿ: ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ರಚನೆ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.

Advertisement

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿಯ ಡಾ| ಸಿ.ಎನ್‌.ಅಶ್ವತ್ಥನಾರಾಯಣ ಅವರು, ಸಿಎಂ ಹಾಗೂ ಸಚಿವರು ಮಕ್ಕಳ ಜತೆ ಚೆಲ್ಲಾಟ ಆಡುತ್ತಿದ್ದಾರೆ ಎಂದಿದ್ದಾರೆ. ಗುರುವಾರ ಸುವರ್ಣಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮಧು ಬಂಗಾರಪ್ಪ, ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ರದ್ದತಿ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಪ್ರಸ್ತಾವಿಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿರುವುದು ಗೊತ್ತಿದೆ. ಅವರು ಪ್ರಸ್ತಾವಿಸಲಿ, ನಾವು ಸಮರ್ಥ ಉತ್ತರ ನೀಡುತ್ತೇವೆ. ಈಗಾಗಲೇ ಸಮಿತಿ ರಚಿಸಿ ಅಧ್ಯಕ್ಷರ ನೇಮಕವೂ ಆಗಿದೆ. ಎಸ್‌ಇಪಿ ರಚನೆ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.

ನಾವು ಅಧಿಕಾರಕ್ಕೆ ಬಂದರೆ ಎನ್‌ಇಪಿ ರದ್ದುಪಡಿಸುತ್ತೇವೆ ಎಂದಿ ದ್ದೆವು. ಪರ್ಯಾಯವಾಗಿ ರಾಜ್ಯ ಶಿಕ್ಷಣ ನೀತಿ ರಚಿಸಲಾಗುತ್ತಿದೆ. ಎನ್‌ಇಪಿಗಿಂತ ಎಸ್‌ಇಪಿ ಉತ್ತಮವಾಗಿರಲಿದೆ. ಬಹುಭಾಷೆಯ ಆಯ್ಕೆಗಳು ಇರಲಿವೆ. ಎನ್‌ಸಿಇಆರ್‌ಟಿಯಿಂದಲೇ ಪಠ್ಯಕ್ರಮ ಕೊಡಲಾಗುತ್ತದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಅಶ್ವತ್ಥನಾರಾಯಣ, 1968ರಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಆರಂಭವಾಗಿದೆ. ಅಂದಿನ ಕೇಂದ್ರ ಸರಕಾರವೇ ಘೋಷಿಸಿದ ಶಿಕ್ಷಣ ನೀತಿ ಅದು. ಪ್ರತ್ಯೇಕ ಶಿಕ್ಷಣ ನೀತಿ ತರಲು ಸಾಧ್ಯವಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್‌ ಶಾಲೆಯಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿದ್ದಾರಾ? ಯುಜಿಸಿ ಮಾನ್ಯತೆ ಇಲ್ಲದೆ ಪದವಿ ಕಾಲೇಜು ನಡೆಸಲು ಸಾಧ್ಯವಿಲ್ಲ. ಸುಮ್ಮನೆ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ. ಎನ್‌ಇಪಿಯಲ್ಲಿ ಏನು ಕೊರತೆ ಇದೆ ಎಂಬುದನ್ನು ಹೇಳಲಿ. ಎಸ್‌ಇಪಿ ಸಮಿತಿಗೆ ಉತ್ತರ ಭಾರತೀಯರನ್ನು ಅಧ್ಯಕ್ಷರನ್ನಾಗಿ ನೇಮಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಅರ್ಧ ದಿನದ ಕಲಾಪವನ್ನೇ ನುಂಗಿದ ಶಿಕ್ಷಣ ನೀತಿ ಚರ್ಚೆ
ಬೆಳಗಾವಿ: ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಪಡಿಸಿ ರಾಜ್ಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಮುಂದಾಗಿರುವ ರಾಜ್ಯ ಸರಕಾರದ ಕ್ರಮದ ಪರ ಹಾಗೂ ವಿರುದ್ಧ ವಿಧಾನ ಪರಿಷತ್ತಿನಲ್ಲಿ ಸತತ ಮೂರು ಗಂಟೆ ಚರ್ಚೆ ನಡೆಯಿತು. ಗುರುವಾರ ಮಧ್ಯಾಹ್ನ ಭೋಜನ ವಿರಾಮದ ಬಳಿಕ ಆರಂಭವಾದ ಕಲಾಪದಲ್ಲಿ ಇದೇ ವಿಚಾರವಾಗಿ ಆಡಳಿತ-ವಿಪಕ್ಷಗಳ ಬರೋಬ್ಬರಿ 25 ಸದಸ್ಯರು ಸಂಜೆ 6.30ರ ವರೆಗೆ ಬೆಳಕು ಚೆಲ್ಲಿದರು. ವಿಪಕ್ಷ ಬಿಜೆಪಿ ಸದಸ್ಯರು ಎನ್‌ಇಪಿ ಜಾರಿಗೆ ಆಗ್ರಹಿಸಿದರೆ, ಆಡಳಿತಾರೂಢ ಸದಸ್ಯರು ಎಸ್‌ಇಪಿ ಜಾರಿಗೆ ಆಗ್ರಹಿಸಿದರು.

Advertisement

ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳು, ಸಿಬಿಎಸ್‌ಇ, ಐಸಿಎಸ್‌ಇ ಇನ್ನಿತರ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಲ್ಲಿದ್ದು, ಸರಕಾರದ ವ್ಯಾಪ್ತಿಯ 48 ಸಾವಿರ ಶಾಲೆಗಳಲ್ಲಿ ಮಾತ್ರ ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುತ್ತೀರಾ? ಎನ್‌ಇಪಿ ರದ್ದುಪಡಿಸುವ ಮೊದಲು ಅದರಲ್ಲಿನ ಲೋಪದೋಷಗಳ ಬಗ್ಗೆ ಏನಾದರೂ ಅಧ್ಯಯನಗಳು ನಡೆದಿವೆಯೇ? ಎನ್‌ಇಪಿ ಅಡಿ 50 ಸಾವಿರ ಕೋಟಿ ರೂ. ರಾಷ್ಟ್ರೀಯ ಸಂಶೋಧನ ನಿಧಿಯನ್ನು ಕೇಂದ್ರ ಸರಕಾರ ಕೊಡುತ್ತದೆ. ಕರ್ನಾಟಕದ ಪಾಲು ಕೈತಪ್ಪಿ ಹೋಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಎಸ್‌ಇಪಿ ಬೆಂಬಲಿಸಿ ಮಾತನಾಡಿದ ಕಾಂಗ್ರೆಸ್‌ನ ನಾಗರಾಜ ಯಾದವ್‌, ಕೇಂದ್ರ ಸರಕಾರವು ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಬೇಕಿತ್ತು. ರಾಜ್ಯ ಸರಕಾರ, ಇಲ್ಲಿನ ಶಿಕ್ಷಣ ಸಂಸ್ಥೆ, ಪೋಷಕರ ಅಭಿಪ್ರಾಯ ಸಂಗ್ರಹಿಸಿ ಎನ್‌ಇಪಿ ಮಾಡಬೇಕಿತ್ತು. ಏಕಪಕ್ಷೀಯ ನಿರ್ಧಾರ ಸರಿಯಲ್ಲ ಎಂದರು. ಚರ್ಚೆಯ ಬಳಿಕ ಸರಕಾರ ಉತ್ತರ ಕೊಡಬೇಕಿತ್ತಾದರೂ ಸಚಿವ ಸಂಪುಟ ಸಭೆ ಇದ್ದುದರಿಂದ ಸದಸ್ಯರ ಚರ್ಚೆಯ ಬಳಿಕ ಉಪಸಭಾಪತಿ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿದರು.

Advertisement

Udayavani is now on Telegram. Click here to join our channel and stay updated with the latest news.

Next