Advertisement

“ಗೌಡ್ರ ಹೋಟೆಲ್‌’ನಲ್ಲಿ ಸೆಂಟಿಮೆಂಟ್‌ ಪಾಕ

06:32 PM Dec 01, 2017 | |

“ಪಾಕಶಾಸ್ತ್ರದ ಪ್ರಾಮುಖ್ಯತೆಯನ್ನು ತಿಳಿಸಿಕೊಡಿ …’ – ಗೌಡರು ಒಂದು ಚೀಟಿಯಲ್ಲಿ ಹೀಗೆ ಬರೆದು ಅದನ್ನು ತನ್ನ ಮೊಮ್ಮಗನ ಕೈಯಲ್ಲಿಟ್ಟು ಬಿಜಾಪುರದಲ್ಲಿರುವ ಅನಂತಶಾಸ್ತ್ರಿಯವರಿಗೆ ಕೊಡುವಂತೆ ಹೇಳುತ್ತಾರೆ. ಅನಂತಶಾಸ್ತ್ರಿಯವರು ಗೌಡರ ಮೊಮ್ಮಗನಿಗೆ ಪಾಠ ಮಾಡೋದಿಲ್ಲ. ಬದಲಾಗಿ ತನ್ನ ಜೊತೆಗೆ ಕರೆದುಕೊಂಡು ಹೋಗುತ್ತಾರೆ. ಅವರು ಹೋಗುವ ಜಾಗ ಹಾಗೂ ಮಾಡುವ ಕೆಲಸವೇ ದೊಡ್ಡ ಪಾಠ.

Advertisement

ಅದಕ್ಕಿಂತ ಮುನ್ನ ತಮ್ಮ ತಾತನ ಜೊತೆಗೆ ಪಾಕಶಾಸ್ತ್ರದ ಪಟ್ಟುಗಳನ್ನು ಕಲಿತಿದ್ದ ಮೊಮ್ಮಗನಿಗೆ ಅನಂತಶಾಸ್ತ್ರಿಯವರ ಪಾಠ ಮತ್ತಷ್ಟು ಪರಿಣಾಮ ಬೀರುತ್ತದೆ. ಅದು ಎಷ್ಟರಮಟ್ಟಿಗೆಂದರೆ ಆತನ ನಿರ್ಧಾರವನ್ನೇ ಬದಲಿಸಿಬಿಡುತ್ತದೆ. “ಗೌಡರ ಹೋಟೆಲ್‌’ ಚಿತ್ರ ನಿಮಗೇನಾದರೂ ಇಷ್ಟವಾಗುತ್ತದೆ ಅಂದರೆ ಅದಕ್ಕೆ ಕಾರಣ ಅದರಲ್ಲಿರುವ ಒಂದಷ್ಟು ಸೂಕ್ಷ್ಮಅಂಶಗಳು. ಚಿತ್ರದಲ್ಲಿ ತಾತ-ಮೊಮ್ಮಗನ ಬಾಂಧವ್ಯವಿದೆ, ಜೊತೆಗೆ ಬದುಕು ಕಟ್ಟಿಕೊಡುವ ರೀತಿಯೂ ಇದೆ.

ಅವೆಲ್ಲವನ್ನು ಭಾವನಾತ್ಮಕ ಸನ್ನಿವೇಶಗಳ ಮೂಲಕ ಕಟ್ಟಿಕೊಡಲಾಗಿದೆ. ಅಂದಹಾಗೆ, ಇದು ಮಲಯಾಳಂನ “ಉಸ್ತಾದ್‌ ಹೋಟೆಲ್‌’ ಚಿತ್ರದ ರೀಮೇಕ್‌. ಅದನ್ನಿಲ್ಲಿ “ಗೌಡ್ರು ಹೋಟೆಲ್‌’ನ್ನಾಗಿಸಲಾಗಿದೆ. ಇದು ಕಮರ್ಷಿಯಲ್‌ ಸಿನಿಮಾ ಎಂಬುದು ಎಷ್ಟು ಸತ್ಯವೋ, ಅದರಾಚೆಗೆ ಒಂದು ಒಳ್ಳೆಯ ಸಂದೇಶವಿರುವ ಸಿನಿಮಾ ಎಂಬುದು ಕೂಡಾ ಅಷ್ಟೇ ಸತ್ಯ. ಯಾವುದೇ ಬಿಲ್ಡಪ್‌ಗ್ಳಿಲ್ಲದೇ, ಹೆಚ್ಚು ಅನಾವಶ್ಯಕ ಅಂಶಗಳಿಲ್ಲದೇ ಕಥೆಯೊಂದಿಗೆ ಟ್ರಾವೆಲ್‌ ಮಾಡುವ ಮೂಲಕ ಸಿನಿಮಾ ನಿಮ್ಮನ್ನು ಯೋಚನೆಗೆ ಹಚ್ಚುತ್ತದೆ.

ಅದಕ್ಕೆ ಕಾರಣ ಅದರಲ್ಲಿನ ವಿಷಯ. ಹಸಿವಿನ ಮುಂದೆ ಯಾವುದೂ ಇಲ್ಲ. ಹಸಿದವನು ಹೊಟ್ಟೆ ತುಂಬಾ ಊಟ ಮಾಡಿ ಖುಷಿಯಿಂದ ಹರಸಿದರೆ ಅದಕ್ಕಿಂತ ತೃಪ್ತಿ ಇನ್ನೊಂದಿಲ್ಲ ಎಂಬ ಅಂಶವೂ ಇಲ್ಲಿ ಪ್ರಮುಖವಾಗಿ ಕಾಣುತ್ತದೆ. ಆ ಮಟ್ಟಿಗೆ “ಗೌಡ್ರು ಹೋಟೆಲ್‌’ ಒಂದು ಗಂಭೀರ ವಿಷಯ ಹೊಂದಿರುವ ಸಿನಿಮಾ. ಹೋಟೆಲ್‌ ನಂಬಿಕೊಂಡು, ಜನರ ಸೇವೆಯಲ್ಲೇ ಖುಷಿ ಕಾಣುವ ಅಪ್ಪ, ಅಪ್ಪನಂತೆ ಅಡುಗೆ ಭಟ್ಟನ ಮಗ ಎಂದು ಕರೆಸಿಕೊಳ್ಳಲು ಇಷ್ಟವಿಲ್ಲದೇ,

ದೊಡ್ಡ ಬಿಝಿನೆಸ್‌ ಮ್ಯಾನ್‌ ಆಗುವ ಮಗ, ಈ ನಡುವೆ ಅಪ್ಪನ ಬಿಝಿನೆಸ್‌ ಬಗ್ಗೆ ಆಸಕ್ತಿ ಇಲ್ಲದೇ ತಾತನಂತೆ ಖ್ಯಾತ ಬಾಣಸಿಗನಾಗಿ ಸ್ಟಾರ್‌ ಹೋಟೆಲ್‌ ಸೇರಿಕೊಳ್ಳಬೇಕೆಂದು ಕನಸು ಕಾಣುವ ಮೊಮ್ಮಗ. ಹೀಗೆ ಮೂರು ಟ್ರ್ಯಾಕ್‌ಗಳಲ್ಲಿ ಕಥೆ ಸಾಗುತ್ತದೆ. ಹಾಗಂತ ಈ ಮೂರು ಟ್ರ್ಯಾಕ್‌ಗಳು ಬೇರೆಯಾಗಿ ಕಾಣೋದಿಲ್ಲ. ಜೊತೆಯಾಗಿಯೇ ಸಾಗುತ್ತದೆ. ಈ ಸಿನಿಮಾದ ಹೈಲೈಟ್‌ ಎಂದರೆ ಸೆಂಟಿಮೆಂಟ್‌. ಹಿರಿಯ ವ್ಯಕ್ತಿಯೊಬ್ಬನ ಕಾಯಕ ಪ್ರೇಮ ಹಾಗೂ ಆತ ಅದನ್ನು ಮುಂದುವರೆಸಿಕೊಂಡು ಹೋಗುವ ಅಂಶಗಳು ಚಿತ್ರವನ್ನು ಮುನ್ನಡೆಸಿಕೊಂಡು ಹೋಗುತ್ತವೆ.

Advertisement

ಚಿತ್ರದ ನಿರೂಪಣೆ ವೇಗವಾಗಿರಬೇಕಿತ್ತೆಂದು ಅನಿಸದೇ ಇರದು. ನಿರೂಪಣೆಯಲ್ಲಿ ವೇಗ ಕಾಯ್ದುಕೊಂಡಿದ್ದರೆ ಹೋಟೆಲ್‌ ಮಸಾಲೆ ಇನ್ನೂ ಘಮ್‌ ಅಂತಿತ್ತು. ನಿರ್ದೇಶಕ ಪಿ.ಕುಮಾರ್‌ ಈ ಸಿನಿಮಾ ಮಾಡಲು ಹೆಚ್ಚು ಕಷ್ಟಪಟ್ಟಿಲ್ಲ. ಮೂಲ ಚಿತ್ರಕ್ಕೆ ಧಕ್ಕೆಯಾಗದಂತೆ ಅನಾವಶ್ಯಕ ಅಂಶಗಳನ್ನು ತುರುಕದೇ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಹಾಗೆ ನೋಡಿದರೆ ನಾಯಕ ರಚನ್‌ಗೆ ಇದು ಮೊದಲ ಸಿನಿಮಾ. ಹಾಗಂತ ಇಲ್ಲಿ ಅವರು ಹೀರೋ ಅನ್ನೋದಕ್ಕಿಂತ ಪ್ರಕಾಶ್‌ ರೈಯವರೇ ಹೀರೋ ಎನ್ನಬಹುದು. ಒಂದು ಕಡೆ ಪ್ರಕಾಶ್‌ ರೈ ಮತ್ತೂಂದು ಕಡೆ ಅನಂತ್‌ನಾಗ್‌…

ಈ ಇಬ್ಬರು ನಟರು ಸಿನಿಮಾವನ್ನು ಮುನ್ನಡೆಸಿಕೊಂಡು ಹೋಗುತ್ತಾರೆ. ಮೊದಲೇ ಹೇಳಿದಂತೆ ಇದು ಸೆಂಟಿಮೆಂಟ್‌ ಸಿನಿಮಾವಾದ್ದರಿಂದ ಅದನ್ನು ಅಷ್ಟೇ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ನಾಯಕ ರಚನ್‌ ತಕ್ಕಮಟ್ಟಿಗೆ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಸೆಂಟಿಮೆಂಟ್‌ ದೃಶ್ಯಗಳಲ್ಲಿ ಅವರು ಇನ್ನಷ್ಟು ಪಳಗಬೇಕಿದೆ. ನಾಯಕಿ ವೇದಿಕಾಗೆ ಇಲ್ಲಿ ಹೆಚ್ಚು ಕೆಲಸವಿಲ್ಲ. ಆದರೂ ಇದ್ದಷ್ಟು ಹೊತ್ತು ಲವಲವಿಕೆಯಿಂದ ನಟಿಸಿದ್ದಾರೆ. ಉಳಿದಂತೆ ಟೆನ್ನಿಸ್‌ ಕೃಷ್ಣ, ಸಿಹಿಕಹಿ ಚಂದ್ರು, ಕಡ್ಡಿಪುಡಿ ಚಂದ್ರು, ಯತಿರಾಜ್‌ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಯುವನ್‌ ಶಂಕರ್‌ ರಾಜಾ ಅವರ ಸಂಗೀತ ಚಿತ್ರಕ್ಕೆ ಪೂರಕ.

ಚಿತ್ರ: ಗೌಡ್ರು ಹೋಟೆಲ್‌
ನಿರ್ಮಾಣ: ಸತೀಶ್‌ ರೆಡ್ಡಿ, ರಮೇಶ್‌ ಶಿವ, ಸತ್ಯನ್‌
ನಿರ್ದೇಶನ: ಪಿ.ಕುಮಾರ್‌
ತಾರಾಗಣ: ರಚನ್‌ ಚಂದ್ರ, ವೇದಿಕಾ, ಪ್ರಕಾಶ್‌ ರೈ, ಅನಂತ್‌ ನಾಗ್‌, ಟೆನ್ನಿಸ್‌ ಕೃಷ್ಣ ಮತ್ತಿತರರು. 

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next