Advertisement

Tamil Nadu Minister: ಬಂಧನವಾಗಿ 8 ತಿಂಗಳ ಬಳಿಕ ರಾಜೀನಾಮೆ ನೀಡಿದ ತಮಿಳುನಾಡು ಸಚಿವ

08:36 AM Feb 13, 2024 | Team Udayavani |

ಚೆನ್ನೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿ ಪುಝಲ್ ಜೈಲು ಸೇರಿರುವ ಸಚಿವ ಸೆಂಥಿಲ್ ಬಾಲಾಜಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಬಾಲಾಜಿ ಅವರು ತಮಿಳುನಾಡು ಮುಖ್ಯಮಂತ್ರಿಗೆ ಪತ್ರ ರವಾನಿಸಿದ್ದಾರೆ. ಜೊತೆಗೆ ರಾಜ್ಯಪಾಲರ ಭವನಕ್ಕೂ ಪತ್ರ ರವಾನೆಯಾಗಿದೆ ಎನ್ನಲಾಗಿದೆ.

2011ರಿಂದ 2015ರವರೆಗೆ ಎಐಎಡಿಎಂಕೆ ಆಡಳಿತದಲ್ಲಿ ಸಾರಿಗೆ ಸಚಿವರಾಗಿದ್ದಾಗ ಸೆಂಥಿಲ್ ಬಾಲಾಜಿ ಅವರು ಸಾರಿಗೆ ಸಂಸ್ಥೆಯಲ್ಲಿ ಕೆಲಸ ಕೊಡಿಸಲು ಹಣ ಪಡೆದ ಪ್ರಕರಣದ ತನಿಖೆ ನಡೆಸುವಂತೆ ಕಳೆದ ಮೇನಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.

ಕೋರ್ಟ್ ಆದೇಶದ ಮೇರೆಗೆ ಆದಾಯ ತೆರಿಗೆ ಇಲಾಖೆಯು 2023 ರ ಮೇ 26 ರಿಂದ ಜೂನ್ 2, 2023 ರವರೆಗೆ 8 ದಿನಗಳ ಕಾಲ ಸಚಿವ ಬಾಲಾಜಿ ಅವರ ಕಿರಿಯ ಸಹೋದರ ಅಶೋಕ್ ಅವರ ಮನೆ, ಅವರ ಸಂಬಂಧಿಕರು, ಸ್ನೇಹಿತರು, ಗುತ್ತಿಗೆದಾರರ ಮನೆಗಳು, ಕರೂರ್ ರಾಮಕೃಷ್ಣಪುರಂನಲ್ಲಿರುವ ಕಲ್ಕ್ವಾರಿ ಸೇರಿದಂತೆ 20 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿತು. ಈ ವೇಳೆ ವಿವಿಧ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಇದರ ಬೆನ್ನಲ್ಲೇ 10 ದಿನಗಳ ಬಳಿಕ ಜೂನ್ 13ರಂದು 20ಕ್ಕೂ ಹೆಚ್ಚು ಜಾರಿ ಅಧಿಕಾರಿಗಳು 5 ಕಾರುಗಳಲ್ಲಿ ಕೇಂದ್ರ ಭದ್ರತಾ ಪಡೆಯ ರಕ್ಷಣೆಯಲ್ಲಿ ಕರೂರು ರಾಮೇಶ್ವರಪಟ್ಟಿಯಲ್ಲಿರುವ ಸಚಿವ ಸೆಂಥಿಲಬಾಲಾಜಿ ಅವರ ಮನೆ ಮೇಲೆ ದಾಳಿ ನಡೆಸಿತು.

ಇದರ ಬೆನ್ನಲ್ಲೇ ಅಕ್ರಮ ಹಣ ವರ್ಗಾವಣೆ ಆರೋಪದಡಿ ಸಚಿವ ಸೆಂಥಿಲ್ ಬಾಲಾಜಿ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿ ಜೂನ್ 14ರಂದು ಬಂಧಿಸಿತ್ತು.

Advertisement

ಈಗಾಗಲೇ ಅವರ ಜಾಮೀನು ಅರ್ಜಿಗಳನ್ನು ಮದ್ರಾಸ್ ಪ್ರಧಾನ ಸೆಷನ್ಸ್ ನ್ಯಾಯಾಲಯ ಮತ್ತು ಹೈಕೋರ್ಟ್ ತಿರಸ್ಕರಿಸಿದೆ, ಎರಡನೇ ಜಾಮೀನು ಅರ್ಜಿಯನ್ನು ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿದೆ.

ಫೆಬ್ರವರಿ 14 ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ. ಈ ಪ್ರಕರಣದಲ್ಲಿ ಸೆಂಥಿಲ್ ಬಾಲಾಜಿ ನ್ಯಾಯಾಲಯದ ಕಸ್ಟಡಿಯನ್ನು ಫೆ.15ರವರೆಗೆ ವಿಸ್ತರಿಸಲಾಗಿದೆ.

ಸೆಂಥಿಲ್ ಬಾಲಾಜಿ ಅವರನ್ನು ಖಾತೆ ರಹಿತ ಸಚಿವರನ್ನಾಗಿ ನೇಮಿಸುವಂತೆ ಮುಖ್ಯಮಂತ್ರಿಗಳು ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು. ಆದರೆ ಸಚಿವ ಸ್ಥಾನ ಬದಲಾವಣೆಗೆ ಒಪ್ಪಿಗೆ ಸೂಚಿಸಿರುವ ರಾಜ್ಯಪಾಲ ಆರ್.ಎನ್.ರವಿ, ಸೆಂಥಿಲ್ ಬಾಲಾಜಿ ಖಾತೆ ರಹಿತ ಸಚಿವರಾಗಿ ಮುಂದುವರಿಯುವುದನ್ನು ಒಪ್ಪಲಿಲ್ಲ. ಇದಾದ ನಂತರ ತಮಿಳುನಾಡು ಸರ್ಕಾರ ಸೆಂಥಿಲ್ ಬಾಲಾಜಿ ಅವರನ್ನು ಖಾತೆ ರಹಿತ ಸಚಿವರನ್ನಾಗಿ ಇರಿಸಿಕೊಂಡು ಆಡಳಿತಾತ್ಮಕ ಆದೇಶ ಹೊರಡಿಸಿತು.

ತಮಿಳುನಾಡು ಸರ್ಕಾರದ ಈ ಆದೇಶದ ವಿರುದ್ಧ ಮದ್ರಾಸ್ ಹೈಕೋರ್ಟ್‌ನಲ್ಲಿ ದಾಖಲಾದ ಮೊಕದ್ದಮೆಯನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪೀಠವು ವಿಚಾರಣೆ ನಡೆಸಿತು ಮತ್ತು ಸೆಂಥಿಲ್ ಬಾಲಾಜಿ ಅವರು ಖಾತೆ ಇಲ್ಲದೆ ಸಚಿವರಾಗಿ ಮುಂದುವರೆಯುವುದು ಸಂವಿಧಾನದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ನೈತಿಕವಾಗಿಯೂ ಸರಿಯಲ್ಲ. ಇದು ಉತ್ತಮ ಆಡಳಿತ ಮತ್ತು ಆಡಳಿತ ಶುಚಿತ್ವಕ್ಕೆ ಪೂರಕವಾಗಿಲ್ಲ. ಹೀಗಾಗಿ ಅವರು ಸಂಪುಟದಲ್ಲಿ ಉಳಿಯಬೇಕೇ ಬೇಡವೇ ಎಂಬುದನ್ನು ತಮಿಳುನಾಡು ಮುಖ್ಯಮಂತ್ರಿ ನಿರ್ಧರಿಸಬೇಕು ಎಂದು ಸಲಹೆ ನೀಡಿದರು.

ಈ ಹಿನ್ನೆಲೆಯಲ್ಲಿ ಸಚಿವ ಸೆಂಥಿಲ್ ಬಾಲಾಜಿ ಅವರು ತಮಿಳುನಾಡು ಮುಖ್ಯಮಂತ್ರಿಗೆ ರಾಜೀನಾಮೆ ಪತ್ರ ರವಾನಿಸಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಈ ಪತ್ರವನ್ನು ರಾಜ್ಯಪಾಲರ ಭವನಕ್ಕೆ ರವಾನಿಸಲಾಗುವುದು. ಬಳಿಕ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ. ಸೆಂಥಿಲ್ ಬಾಲಾಜಿ ಕಳೆದ 8 ತಿಂಗಳಿಂದ ಖಾತೆ ಇಲ್ಲದೆ ಸಚಿವರಾಗಿದ್ದಾರೆ ಎಂಬುದು ಇಲ್ಲಿ ಗಮನಾರ್ಹವಾಗಿದೆ.

ಇದನ್ನೂ ಓದಿ: Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ ಲಭಿಸಿದ ಸಮಾಧಾನ

Advertisement

Udayavani is now on Telegram. Click here to join our channel and stay updated with the latest news.

Next