Advertisement

ಗಲ್ಲು ಚೀನದಲ್ಲಿ ಹೆಚ್ಚು; ಭಾರತದಲ್ಲಿಲ್ಲ

06:22 AM Apr 12, 2017 | Team Udayavani |

ಲಂಡನ್‌/ಬೀಜಿಂಗ್‌: ಭಾರತವೂ ಸೇರಿದಂತೆ ವಿಶ್ವಾದ್ಯಂತ ಗಲ್ಲು ಶಿಕ್ಷೆ ರದ್ದಾಗಬೇಕೆಂಬ ಒತ್ತಾಯದ ನಡುವೆಯೇ ವಿವಿಧ ರಾಷ್ಟ್ರಗಳಲ್ಲಿ ಮರಣ ದಂಡನೆ ಶಿಕ್ಷೆ ಜಾರಿಯಾದ ಮಾಹಿತಿ ಬಹಿರಂಗವಾಗಿದೆ.

Advertisement

 ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್‌ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಚೀನ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಗಲ್ಲು ಶಿಕ್ಷೆ ಜಾರಿ ಮಾಡಿದ್ದರೆ, ಕಳೆದ ವರ್ಷ ಭಾರತದಲ್ಲಿ ಒಂದೇ ಒಂದು ಶಿಕ್ಷೆ ಜಾರಿಯಾಗಿಲ್ಲ. ಆದರೆ 136 ಪ್ರಕರಣಗಳಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ. 2015ಕ್ಕೆ ಹೋಲಿಕೆ ಮಾಡಿದಾಗ ಈ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಆದರೆ ದೇಶದ ವಿವಿಧ ಕಾರಾಗೃಹಗಳಲ್ಲಿ 400ಕ್ಕೂ ಅಧಿಕ ಮಂದಿ ಈ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ. 

ಚೀನದಲ್ಲಿ ಕಳೆದ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಆರೋಪಿಗಳನ್ನು ಗಲ್ಲಿಗೇರಿಸಿದೆ. ಅದು ಅತ್ಯಂತ ರಹಸ್ಯವಾಗಿ ನಡೆಯುತ್ತದೆ ಎಂದು ಆ್ಯಮ್ನೆಸ್ಟಿ ತನ್ನ ವರದಿಯಲ್ಲಿ ತಿಳಿಸಿದೆ. 2014 ಮತ್ತು 2016ರ ನಡುವೆ 931 ಮಂದಿಯನ್ನು ಗಲ್ಲಿಗೇರಿಸಿದ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಇದೆ. 

ಜಾಗತಿಕವಾಗಿ ನೋಡುವುದಿದ್ದರೆ ಈ ಶಿಕ್ಷೆ ಜಾರಿಯಲ್ಲಿ ಶೇ.37ರಷ್ಟು ಇಳಿಮುಖವಾಗಿದೆ ಎಂದಿದೆ ವರದಿ. ವಿಶ್ವದ ಒಟ್ಟು 1,034 ಗಲ್ಲು ಶಿಕ್ಷೆಗಳ ಪೈಕಿ ಶೇ.84ರಷ್ಟು ಪ್ರಕರಣಗಳು ಇರಾನ್‌, ಸೌದಿ ಅರೇಬಿಯಾ, ಇರಾಕ್‌ ಮತ್ತು ಪಾಕಿಸ್ಥಾನಗಳಲ್ಲಿ ನಡೆಯುತ್ತವೆ. ಪಾಕಿಸ್ಥಾನದಲ್ಲಿ 2015ರಲ್ಲಿ 326 ಮಂದಿಗೆ ಶಿಕ್ಷೆ ಜಾರಿ ಮಾಡಲಾಗಿದ್ದರೆ, 2016ರಲ್ಲಿ ಅದರ ಪ್ರಮಾಣ 87ಕ್ಕೆ ಇಳಿದಿದೆ. ಕುತೂಹಲಕಾರಿ ವಿಚಾರವೆಂದರೆ 2006ರ ಬಳಿಕ ಈ ಪಟ್ಟಿಯಲ್ಲಿ ಅಮೆರಿಕ ಮೊದಲ ಐದು ಸ್ಥಾನಗಳಲ್ಲಿ ದಾಖಲಾಗದೇ ಇರುವುದು ಗಮನಾರ್ಹ. ಕಳೆದ ವರ್ಷ 20 ಮಂದಿಗೆ ಪಾಶಿ ಶಿಕ್ಷೆಯನ್ನು ಆ ರಾಷ್ಟ್ರದಲ್ಲಿ ಜಾರಿ ಮಾಡಲಾಗಿದೆ. 1991ರ ಬಳಿಕ ಇದು ಅತ್ಯಂತ ಕಡಿಮೆ ಸಂಖ್ಯೆಯದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next