ಬಾಗಲಕೋಟೆ: ಕೋವಿಡ್-19 ಮಹಾಮಾರಿ ವಿಶ್ವದೆಲ್ಲೆಡೆ ಹರಡಿ ಎಲ್ಲ ಕ್ಷೇತ್ರಗಳನ್ನು ಸ್ತಬ್ಧಗೊಳಿಸಿದೆ. ಅದರಲ್ಲೂ ಶೈಕ್ಷಣಿಕ ರಂಗದಲ್ಲಿ ಎಲ್ಲಾ ಶಾಲಾ ಕಾಲೇಜುಗಳು ಲಾಕ್‌ಡೌನ್‌ನಿಂದ ಕಾರ್ಯ ನಿರ್ವಹಿಸುತ್ತಿಲ್ಲ, ವಿದ್ಯಾರ್ಥಿಗಳು, ಶಿಕ್ಷಕರು ಮನೆಯಲ್ಲಿಯೇ ಕಾಲ ಕಳೆಯುವಂತಾಗಿದೆ.
ಬಸವೇಶ್ವರ ಇಂಜಿನೀಯರಿಂಗ್ ಕಾಲೇಜಿನ ಇಲೆಕ್ಟ್ರಿಕಲ್ ವಿಭಾಗದ ವಿದ್ಯಾರ್ಥಿ ಅಭಿಷೇಕ ಹಿಪ್ಪರಗಿ ಮನೆಯಲ್ಲಿದ್ದುಕೊಂಡೆ ಸಮಯವನ್ನು ವ್ಯರ್ಥ ಮಾಡದೇ ಸೃಜನಾತ್ಮಕವಾಗಿ ಯೋಚಿಸಿ ಒಂದು ಹೊಸ ಪ್ರಾತ್ಯಕ್ಷಿಕೆ ಸೆನ್ಸಾರ್ ಆಧಾರಿತ ಸ್ಯಾನಿಟೈಸರ್ ವಿನೂತನ ಯಂತ್ರ ಸಿದ್ಧಪಡಿಸಿದ್ದಾನೆ.
ಸ್ಥಳೀಯವಾಗಿ ಸಿಗುವ ಇಲೆಕ್ಟ್ರಾನಿಕ್ ಉಪಕರಣ ಬಳಸಿ ಸಿದ್ಧಪಡಿಸಿದ ಈ ಯಂತ್ರದಲ್ಲಿ ನೇರವಾಗಿ ಕೈಯನ್ನು ಸೆನ್ಸಾರ್ ಅಳವಡಿಸಿದ ನಲ್ಲಿಯ ಕೆಳಗೆ ಹಿಡಿದರೆ ಸಾಕು ತಾನಾಗಿಯೇ ಸ್ಯಾನಿಟೈಸರ್ ಕೈ ಮೇಲೆ ಸ್ಪ್ರೇ ಆಗುತ್ತದೆ. ಕೇವಲ ಎರಡು ಸಾವಿರ ರೂಪಾಯಿಯಲ್ಲಿ ಸಿಗಬಹುದಾದ ಯಂತ್ರ ಇದಾಗಿದೆ.
ಸಾಮಾನ್ಯವಾಗಿ ಸಾರ್ವಜನಿಕ ಕಚೇರಿಗಳಲ್ಲಿ ಬಳಸುತ್ತಿರುವ ಬಾಟಲಿಯಲ್ಲಿ ಸ್ಯಾನಿಟೈಸರ್ ಪ್ರಸ್ ಮಾಡಿ ತೆಗೆದುಕೊಳುವುದರಿಂದ ಅಸುರಕ್ಷತೆಯಿಂದ ಸೋಂಕು ತಗುಲಬಹುದು. ಈ ಸಮಸ್ಯೆಯನ್ನು ಹೋಗಲಾಡಿಸಿ ವಿದ್ಯಾರ್ಥಿಯು ಈ ಯಂತ್ರ ನಿರ್ಮಿಸಿದ್ದಾನೆ ಎಂದು ಕಾಲೇಜಿನ ಪ್ರಾಚಾರ್ಯ ಡಾ|ಎಸ್.ಎಸ್. ಇಂಜಗನೇರಿ ತಿಳಿಸಿದ್ದಾರೆ. ವಿದ್ಯಾರ್ಥಿಯ ಸಮಯದ ಸದುಪಯೋಗ, ಸೃಜನಾತ್ಮಕತೆ ಮತ್ತು ಸಾಮಾಜಿಕ ಕಾಳಜಿಯನ್ನು ಬಿವಿವಿ ಸಂಘದ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ಡಾ| ವೀರಣ್ಣ ಚರಂತಿಮಠ, ತಾಂತ್ರಿಕ ನಿರ್ದೇಶಕ ಡಾ|ಆರ್.ಎನ್.ಹೆರಕಲ್, ಪ್ರಾಚಾರ್ಯ ಡಾ| ಎಸ್.ಎಸ್.ಇಂಜಗನೇರಿ ಮತ್ತು ಇಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಡಾ| ಸುರೇಶ ಜಂಗಮಶೆಟ್ಟಿ ಮುಂತಾದವರು ಅಭಿನಂದಿಸಿದ್ದಾರೆ.