Advertisement
ಡೆಂಟಿನ್ ಹೊರಕ್ಕೆ ತೆರೆದುಕೊಳ್ಳಲು ಕಾರಣವಾಗುವ ಅಂಶಗಳಲ್ಲಿ ದಂತಕುಳಿಗಳು, ಒಡಕು ಹಲ್ಲು, ಒಸಡು ಕುಗ್ಗುವಿಕೆ, ಎನಾಮಲ್ ಅಥವಾ ಹಲ್ಲುಗಳ ಸವಕಳಿ ಸೇರಿರಬಹುದು. ಪರಿದಂತೀಯ ಕಾಯಿಲೆಗಳಿಂದಾಗಿ (ಹಲ್ಲುಗಳನ್ನು ಅವುಗಳ ಸ್ಥಾನದಲ್ಲಿ ಹಿಡಿದಿರಿಸಿಕೊಳ್ಳುವ ಒಸಡು ಮತ್ತು ಎಲುಬುಗಳ ಉರಿಯೂತ) ಒಸಡುಗಳು ಸ್ಥಾನಪಲ್ಲಟಗೊಂಡು ಕೆಳಕ್ಕೆ ಜಾರುವುದು ಸಾಮಾನ್ಯ. ಗ್ಯಾಸ್ಟ್ರೊ ಈಸೋಫೇಗಲ್ ರಿಫ್ಲಕ್ಸ್ ಕಾಯಿಲೆಯಿಂದಾಗಿ ಗ್ಯಾಸ್ಟ್ರಿಕ್ ಆಮ್ಲವು ಬಾಯಿಗೆ ಬರುವುದರಿಂದಲೂ ಹಲ್ಲುಗಳ ಸವಕಳಿ ಉಂಟಾಗಬಹುದು, ಬಾಯಿಯಲ್ಲಿ ಆಮ್ಲವಿರುವುದರಿಂದ ಸೂಕ್ಷ್ಮಸಂವೇದಿಯಾಗಬಹುದು. ಆ್ಯಸಿಡ್ ಹೊಂದಿರುವ ಮೌತ್‌ವಾಶ್‌ಗಳನ್ನು ದೀರ್ಘಕಾಲ ಉಪಯೋಗಿಸುವುದು ಕೂಡ ಹಲ್ಲುಗಳ ಈಗಿರುವ ಸೂಕ್ಷ್ಮ ಸಂವೇದಿ ಗುಣವನ್ನು ಇನ್ನಷ್ಟು ಸೂಕ್ಷ್ಮಗೊಳಿಸಬಹುದು ಮಾತ್ರವಲ್ಲದೆ ಡೆಂಟಿನ್ ಪದರವನ್ನು ಹಾನಿಗೀಡು ಮಾಡಬಹುದು. ಹಲ್ಲುಕುಳಿಗಳು ಅಥವಾ ಒಡಕು ಹಲ್ಲುಗಳು ಬ್ಯಾಕ್ಟೀರಿಯಾಗಳಿಗೆ ಆವಾಸಸ್ಥಾನವಾಗಿ ಹಲ್ಲುಗಳ ಪಲ್ಪ್ಗೆ ಹಾನಿ ಉಂಟು ಮಾಡುವ ಮೂಲಕ ಸೂಕ್ಷ್ಮಸಂವೇದನಶೀಲತೆ ಅಥವಾ ನೋವಿಗೆ ಕಾರಣವಾಗಬಹುದು.
ಟೂತ್‌ಪೇಸ್ಟ್‌ಗಳನ್ನು ಉಪಯೋಗಿಸದೆ ಹೆಚ್ಚು ಫ್ಲೋರೈಡ್ ಅಂಶವುಳ್ಳ, ಸೂಕ್ಷ್ಮ ಸಂವೇದಿ ಹಲ್ಲುಗಳಿಗಾಗಿಯೇ ತಯಾರಿಸಿರುವ ಕಡಿಮೆ ತೀಕ್ಷ್ಣತೆಯ ಟೂತ್‌ಪೇಸ್ಟನ್ನು ಉಪಯೋಗಿಸಬೇಕು. ರಾತ್ರಿ ಮಲಗುವುದಕ್ಕೆ ಮುನ್ನ ಸೂಕ್ಷ್ಮ ಸಂವೇದನೆಯನ್ನು ನಿವಾರಿಸುವ ಟೂತ್‌ಪೇಸ್ಟನ್ನು ಹೊರತೆರೆದುಕೊಂಡಿರುವ ಡೆಂಟಿನ್ ಮತ್ತು ಹಲ್ಲುಗಳ ಬೇರಿಗೆ ತೆಳು ಪದರವಾಗಿ ಉಜ್ಜುವುದು ಉತ್ತಮ. ಮೃದುವಾದ ಬ್ರಿಸ್ಟಲ್‌ಗಳುಳ್ಳ ಬ್ರಶ್ ಉಪಯೋಗಿಸಿ ಮತ್ತು ಹೆಚ್ಚು ತೀವ್ರವಾಗಿಯಲ್ಲದೆ ಮೃದುವಾಗಿ ಹಲ್ಲುಜ್ಜುವುದು ಹಿತಕರ. ಹೆಚ್ಚು ಆಮ್ಲಿàಯವಾದ ಆಹಾರ ಮತ್ತು ಪಾನೀಯಗಳನ್ನು ವರ್ಜಿಸಬೇಕು. ದಿನವೂ ಫ್ಲೋರೈಡ್‌ಯುಕ್ತ ಮೌತ್‌ವಾಶ್ ಉಪಯೋಗಿಸಿ. ಹಲ್ಲು ಕಡಿಯುವುದನ್ನು ವರ್ಜಿಸಬೇಕು ಹಾಗೂ ದಂತವೈದ್ಯರಿಂದ ದಂತರಕ್ಷಕ ಪಡೆದು ಉಪಯೋಗಿಸುವುದು ಪ್ರಯೋಜನಕಾರಿ. ನಾರಿನಂಶ ಅಧಿಕವಿರುವ ಹಣ್ಣು ಮತ್ತು ತರಕಾರಿಗಳು, ಚೀಸ್, ಹಾಲು ಮತ್ತು ಸಾದಾ ಯೋಗರ್ಟ್ ಸೇವಿಸುವುದರಿಂದ ಆಮ್ಲಿàಯತೆ ಸಮತೋಲನಕ್ಕೆ ಬರುತ್ತದೆ ಹಾಗೂ ಬಾಯಿಯಲ್ಲಿ ಬ್ಯಾಕ್ಟೀರಿಯಾ ಆಕ್ರಮಣ ನಿಯಂತ್ರಣಕ್ಕೆ ಬರುತ್ತದೆ. ಹಲ್ಲುಗಳ ಸೂಕ್ಷ್ಮ ಸಂವೇದಿತನಕ್ಕೆ ಕಾರಣವಾಗಿರುವ ಹಲ್ಲು ಹುಳುಕುತನ ಅಥವಾ ಕುಳಿಗೆ ಚಿಕಿತ್ಸೆ ಒದಗಿಸಿ ಸರಿಪಡಿಸಿದರೆ ತೊಂದರೆ ತಾನಾಗಿ ನಿಯಂತ್ರಣಕ್ಕೆ ಬರುತ್ತದೆ. ಫ್ಲೋರೈಡ್ ಜೆಲ್ ಹಚ್ಚುವುದು, ದಂತವೈದ್ಯರನ್ನು ಸಂಪರ್ಕಿಸಿ ವಾರ್ನಿಶ್ ಅಥವಾ ಲೇಸರ್ ಚಿಕಿತ್ಸೆ ಪಡೆಯುವುದು ಇತರ ಕೆಲವು ಮಾರ್ಗಗಳು. ಹಲ್ಲುಗಳ ಬೇರಿನಿಂದಲೇ ವಸಡಿನ ಅಂಗಾಂಶ ಸವಕಳಿಯಾಗಿದ್ದರೆ ಶಸ್ತ್ರಚಿಕಿತ್ಸೆಯ ಮೂಲಕ ವಸಡಿನ ಕಸಿ ನಡೆಸಿ ಬೇರಿಗೆ ರಕ್ಷಣೆ ಒದಗಿಸಬಹುದಾಗಿದೆ. ಇನ್ನಿತರ ಚಿಕಿತ್ಸೆಗಳಿಂದ ಪರಿಹಾರ ಕಾಣದೆ ಇದ್ದರೆ ರೂಟ್‌ಕೆನಲ್ ಚಿಕಿತ್ಸೆಯನ್ನು ಅಂತಿಮ ಪರಿಹಾರೋಪಾಯವಾಗಿ ಆರಿಸಿಕೊಳ್ಳಬಹುದು.
Related Articles
Advertisement
ನಿಮ್ಮ ದಂತ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಅವು ತೊಂದರೆಗೆ ದಾರಿ ಮಾಡಿಕೊಡಬಹುದು. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಮತ್ತು ನಿಯಮಿತವಾಗಿ ದಂತ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳುವುದು ಆರೋಗ್ಯಯುತ ಬಾಯಿ ಮತ್ತು ಹಲ್ಲುಗಳನ್ನು ಹೊಂದುವುದಕ್ಕೆ ಉತ್ತಮ ಮಾರ್ಗಗಳಾಗಿವೆ.
– ಡಾ| ನಿಶು ಸಿಂಗ್ಲಾ ,ಅಸೋಸಿಯೇಟ್ ಪ್ರೊಫೆಸರ್,
ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ ವಿಭಾಗ,
ಮಣಿಪಾಲ ದಂತವೈದ್ಯಕೀಯ ಕಾಲೇಜು, ಮಣಿಪಾಲ.