ಮುಂಬಯಿ : ಇಂದು ಬುಧವಾರದ ದ್ವಿತೀಯಾರ್ಧದ ವಹಿವಾಟಿನಲ್ಲಿ ಎಚ್ ಡಿ ಎಫ್ ಸಿ ಮತ್ತು ಎಚ್ ಡಿ ಎಫ್ ಸಿ ಬ್ಯಾಂಕ್ ಶೇರುಗಳು ಭಾರೀ ಮಾರಾಟ ಒತ್ತಡಕ್ಕೆ ಗುರಿಯಾಗುವುದರೊಂದಿಗೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 354 ಅಂಕಗಳ ಭಾರೀ ನಷ್ಟದೊಂದಿಗೆ ದಿನದ ವಹಿವಾಟನ್ನು 38,585.35 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಜಾಗತಿಕ ಆರ್ಥಿಕ ಪ್ರಗತಿಯ 2019ರ ಅಂದಾಜನ್ನು ಐಎಂಎಫ್ ತನ್ನ ವಿಶ್ವ ಆರ್ಥಿಕ ಮುನ್ನೋಟ ದಲ್ಲಿ ಶೇ.3.3ಕ್ಕೆ ಇಳಿಸಿದುದೇ ವಿಶ್ವಾದ್ಯಂತ ಶೇರು ಪೇಟೆಗಳ ಕುಸಿತಕ್ಕೆ ಕಾರಣವಾಯಿತು. ಇದು ಮುಂಬಯಿ ಶೇರು ಮಾರುಕಟ್ಟೆಯ ಮೇಲೂ ಪ್ರತಿಫಲನಗೊಂಡಿತು.
ಮಧ್ಯಾಹ್ನ ಬಳಿಕದ ವಹಿವಾಟಿನಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್ ಶೇರು ಶೇ.2.07ರ ಕುಸಿತಕ್ಕೆ ಗುರಿಯಾದರೆ ಎಚ್ ಡಿ ಎಫ್ ಸಿ ಶೇರು ಶೇ.1.96ರ ನಷ್ಟವನ್ನು ಅನುಭವಿಸಿತು. ಸೆನ್ಸೆಕ್ಸ್ ನ 354 ಅಂಕಗಳ ನಷ್ಟದ ಅರ್ಧ ಪಾಲಿಗೆ ಈ ಅವಳಿ ಶೇರುಗಳೇ ಕಾರಣವಾದವು.
ಇತರ ಟಾಪ್ ಲೂಸರ್ ಗಳಾದ ಭಾರ್ತಿ ಏರ್‌ಟೆಲ್, ಏಶ್ಯನ್ ಪೇಂಟ್, ಟಿಸಿಎಸ್, ಎಚ್‌ಸಿಎಲ್ ಟೆಕ್, ಟಾಟಾ ಸ್ಟೀಲ್, ಎಸ್‌ಬಿಐ, ಇಂಡಸ್ ಇಂಡ್ ಬ್ಯಾಂಕ್ ಮತ್ತು ಹೀರೋ ಮೋಟೋ ಕಾರ್ಪ್ ಶೇರುಗಳ ಶೇ.3.28ರ ನಷ್ಟಕ್ಕೆ ಗುರಿಯಾದವು.
ಡಾಲರ್ ಎದುರು ರೂಪಾಯಿ ಇಂದು ವಹಿವಾಟಿನ ನಡುವೆ 12 ಪೈಸೆಗಳ ಚೇತರಿಕೆ ಕಂಡು 69.18 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,711 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,141 ಶೇರುಗಳು ಮುನ್ನಡೆ ಸಾಧಿಸಿದವು; 1,401 ಶೇರುಗಳು ಹಿನ್ನಡೆಗೆ ಗುರಿಯಾದವು; 169 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.