ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ನಿರಂತರ ಎರಡನೇ ದಿನವಾಗಿ ಇಂದು ಶುಕ್ರವಾರ 188 ಅಂಕಗಳ ಕುಸಿತಕ್ಕೆ ಗುರಿಯಾಗಿ ದಿನದ ವಹಿವಾಟನ್ನು 34,915.38 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ಆಟೋ, ಹೆಲ್ತ್ ಕೇರ್, ಮೆಟಲ್, ಎಫ್ಎಂಸಿಜಿ ಶೇರುಗಳು ಇಂದು ತೀವ್ರ ಮಾರಾಟ ಒತ್ತಡಕ್ಕೆ ಗುರಿಯಾದವು.
ವಿದೇಶಿ ಬಂಡವಾಳದ ನಿರಂತರ ಹೊರ ಹರಿವು, ನಿರಾಶಾದಾಯಕ ತ್ತೈಮಾಸಿಕ ಫಲಿತಾಂಶಗಳು, ದುರ್ಬಲ ರೂಪಾಯಿ ಮುಂತಾಗಿ ಹಲವಾರು ಕಾರಣಗಳು ಸೆನ್ಸೆಕ್ಸ್ ಕುಸಿಕ್ಕೆ ಕಾರಣವಾದವು. ನಿನ್ನೆಯ ದಿನ ಸೆನ್ಸೆಕ್ಸ್ 73.28 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ ಇಂದು 61.40 ಅಂಕಗಳ ಕುಸಿತಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,618.25 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ವಾರದ ನೆಲೆಯಲ್ಲಿ ಸೆನ್ಸೆಕ್ಸ್ ಕಳೆದ ಆರು ವಾರಗಳಲ್ಲೇ ಮೊದಲ ಬಾರಿಗೆಂಬಂತೆ 54.32 ಅಂಕಗಳ ಕುಸಿತವನ್ನು ಅನುಭವಿಸಿತು. ನಿಫ್ಟಿ 74.05 ಅಂಕಗಳ ಕುಸಿತಕ್ಕೆ ಗುರಿಯಾಯಿತು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಿನ್ನೆ ಗುರುವಾರ 148.42 ಕೋಟಿ ರೂ. ಮೌಲ್ಯದ ಶೇರುಗಳನ್ನು ಮಾರಿದರು; ದೇಶೀಯ ಸಾಂಸ್ಥಿಕ ಹೂಡಿಕೆದಾರರು 578.92 ಕೋಟಿ ರೂ.ಮೌಲ್ಯದ ಶೇರುಗಳನ್ನು ಮಾರಿದರು.