ಮುಂಬಯಿ : ಯುಎಸ್ ಫೆಡ್ ಪಾಲಿಸಿ ಪ್ರಕಟಗೊಳ್ಳುವುದಕ್ಕೆ ಮುನ್ನವೇ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಕಂಡು ಬಂದ ಧನಾತ್ಮಕತೆಯನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 350ಕ್ಕೂ ಅಧಿಕ ಅಂಕಗಳ ಉತ್ತಮ ಜಿಗಿತವನ್ನು ದಾಖಲಿಸಿತು.
ನಿನ್ನೆ ಮಂಗಳವಾರ ಸೆನ್ಸೆಕ್ಸ್ 85.55 ಅಂಕಗಳ ಏರಿಕೆಯೊಂದಿಗೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 19.35 ಅಂಕಗಳ ಏರಿಕೆಯೊಂದಿಗೂ ದಿನದ ವಹಿವಾಟನ್ನು ಕೊನೆಗೊಳಿಸಿದ್ದವು.
ಇಂದು ಬೆಳಗ್ಗೆ 10.50ರ ಸುಮಾರಿಗೆ ಸೆನ್ಸೆಕ್ಸ್ 294.69 ಅಂಕಗಳ ಏರಿಕೆಯೊಂದಿಗೆ 39,341.03 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11,779.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಟಾಪ್ ಗೇನರ್‌ಗಳ ಪೈಕಿ ಟಾಟಾ ಸ್ಟೀಲ್, ಕೋಟಕ್ ಬ್ಯಾಂಕ್, ವೇದಾಂತ, ಟಾಟಾ ಮೋಟರ್, ಎಕ್ಸಿಸ್ ಬ್ಯಾಂಕ್ ಎಸ್ ಬ್ಯಾಂಕ್, ಎಸ್ ಬಿ ಐ, ಇಂಡಸ್ ಇಂಡ್ ಬ್ಯಾಂಕ್, ಮಾರುತಿ, ಅವಳಿ ಎಚ್ ಡಿ ಎಫ್ ಸಿ ಮತ್ತು ಆರ್‌ಐಎಲ್ ಶೇರುಗಳು ಶೇ.3.46ರ ಏರಿಕೆಯನ್ನು ದಾಖಲಿಸಿದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 16 ಪೈಸೆಗಳ ಏರಿಕೆಯನ್ನು ಕಂಡು 69.53 ರೂ.ಗೆ ತಲುಪಿತು. ಬ್ರೆಂಟ್ ಅಂತಾರಾಷ್ಟ್ರೀಯ ಕಚ್ಚಾ ತೈಲ ಇಂದು ಶೇ.0.03ರ ಇಳಿಕೆಯನ್ನು ಕಂಡು ಬ್ಯಾರಲ್ ಗೆ 62.12 ಡಾಲರ್ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.