ಮುಂಬಯಿ : ಐಟಿ ದಿಗ್ಗಜಗಳಾದ ಟಿಸಿಎಸ್ ಮತ್ತು ಇನ್‌ಫೋಸಿಸ್ ಕಂಪೆನಿಗಳು ಇಂದು ತಮ್ಮ ವಾರ್ಷಿಕ ಫಲಿತಾಂಶವನ್ನು ಬಿಡುಗಡೆ ಮಾಡಲಿದ್ದು ಇದಕ್ಕೆ ಮುನ್ನವೇ ಕಂಡು ಬಂದಿರುವ ಹುರುಪಿನ ಬಲದಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 100ಕ್ಕೂ ಅಧಿಕ ಅಂಕಗಳ ಜಿಗಿತವನ್ನು ದಾಖಲಿಸಿತು.
ಇಂದು ಕೇಂದ್ರ ಸರಕಾರ ಆರ್ಥಿಕ ಪ್ರಗತಿಯ ಸ್ಥೂಲ ಅಂಕಿ ಅಂಶಗಳನ್ನು ಪ್ರಕಟಿಸಲಿರುವುದು ಕೂಡ ಹೂಡಿಕೆದಾರರ ಧನಾತ್ಮಕ ನಿರೀಕ್ಷೆಗೆ ಕಾರಣವಾಗಿದ್ದು ಮುಂಬಯಿ ಶೇರು ಪೇಟೆಯಲ್ಲಿ ತೇಜಿ ಕಂಡು ಬಂದಿದೆ.
ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್ 37.34 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 38,644.3 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 5.70 ಅಂಕಗಳ ಏರಿಕೆಯೊಂದಿಗೆ 11,602.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಟಿಸಿಎಸ್ ಶೇರುಗಳು ಶೇ.0.81ರ ಏರಿಕೆಯನ್ನು ಕಂಡವು. ಇದನ್ನು ಅನುಸರಿಸಿ ಏಶ್ಯನ್ ಪೇಂಟ್, ಭಾರ್ತಿ ಏರ್‌ಟೆಲ್, ಟಾಟಾಸ್ಟೀಲ್, ಎಸ್ ಬ್ಯಾಂಕ್, ಸನ್ ಫಾರ್ಮಾ, ಆರ್‌ಐ ಎಲ್, ಎಚ್‌ಸಿಎಲ್ ಟೆಕ್ ಮತ್ತು ಮಾರುತಿ ಸುಜುಕಿ ಶೇರುಗಳು ಶೇ.1.04ರ ಏರಿಕೆಯನ್ನು ದಾಖಲಿಸಿದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 32 ಪೈಸೆಗಳ ಕುಸಿತವನ್ನು ಕಂಡು 69.24 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.