ಮುಂಬಯಿ : ಜಿಡಿಪಿ ಅಂಕಿ ಅಂಶಗಳು ಇಂದು ಪ್ರಕಟವಾಗುವುದನ್ನು ಆಶಾವಾದದಿಂದ ನಿರೀಕ್ಷಿಸುತ್ತಿರುವ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನ ನಷ್ಟವನ್ನು ಕೊಡವಿಕೊಂಡು 100ಕ್ಕೂ ಅಧಿಕ ಅಂಕಗಳ ಮುನ್ನಡೆಯನ್ನು ದಾಖಲಿಸಿತು. ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು ಬೆಳಗ್ಗಿನ ವಹಿವಾಟಿನಲ್ಲಿ 11,700 ಅಂಕಗಳ ಮಟ್ಟವನ್ನು ಪುನರ್ ಸಂಪಾದಿಸಿತು.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ ಮತ್ತೆ ಪುನಃ ನಷ್ಟದ ಹಾದಿಗೆ ಹೊರಳಿಕೊಂಡು 40.24 ಅಂಕಗಳ ನಷ್ಟದೊಂದಿಗೆ 3,649.86 ಅಂಕಗಳ ಮಟ್ಟದಲ್ಲೂ ನಿಫ್ಟಿ 2.60 ಅಂಕಗಳ ನಷ್ಟದೊಂದಿಗೆ 11,674.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಸ್ ಬ್ಯಾಂಕ್, ರಿಲಯನ್ಸ, ಸನ್ ಫಾರ್ಮಾ, ಐಸಿಐಸಿಐ ಬ್ಯಾಂಕ್, ಇನ್‌ಫೋಸಿಸ್ ಶೇರುಗಳು ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಎಚ್‌ಸಿಎಲ್ ಟೆಕ್, ಭಾರ್ತಿ ಇನ್‌ಫ್ರಾಟೆಲ್, ಟೆಕ್ ಮಹೀಂದ್ರ, ಸನ್ ಫಾರ್ಮಾ, ಡಾ. ರೆಡ್ಡೀಸ್ ಲ್ಯಾಬ್ ಮೂಡಿ ಬಂದರೆ ಟಾಪ್ ಲೂಸರ್‌ಗಳಾಗಿ ಎಸ್ ಬ್ಯಾಂಕ್, ವೇದಾಂತ, ರಿಲಯನ್ಸ್, ಐಸಿಐಸಿಐ ಬ್ಯಾಂಕ್, ಮಹೀಂದ್ರ ಶೇರುಗಳು ಹಿನ್ನಡೆ ಕಂಡವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 26 ಪೈಸೆಗಳ ನಷ್ಟಕ್ಕೆ ಗುರಿಯಾಗಿ 71 ರೂ.ಗಳ ಸಾರ್ವಕಾಲಿಕ ದಾಖಲೆಯ ಹೊಸ ತಳಮಟ್ಟಕ್ಕೆ ಕುಸಿಯಿತು.