ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಭರ್ಜರಿ ಜಯಭೇರಿ ಗಳಿಸಿದ ಬೆನ್ನಲ್ಲೇ ಸೋಮವಾರ (ನ.25) ಮುಂಬೈ ಷೇರುಪೇಟೆ(Bombay Stock Market) ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 1,000ಕ್ಕೂ ಅಧಿಕ ಅಂಕಗಳ ಏರಿಕೆ ಕಂಡಿದ್ದು, ಹೂಡಿಕೆದಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಸೌರ ವಿದ್ಯುತ್ ಯೋಜನೆ ಗುತ್ತಿಗೆಗೆ ಸಂಬಂಧಿಸಿದಂತೆ ಉದ್ಯಮಿ ಗೌತಮ್ ಅದಾನಿ ಸುಮಾರು 250 ಮಿಲಿಯನ್ ಡಾಲರ್ ಲಂಚ ನೀಡಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ್ದು, ಏತನ್ಮಧ್ಯೆ ಅದಾನಿ ಸಮೂಹ ಸಂಸ್ಥೆಯ ಷೇರು ಮೌಲ್ಯ ಭರ್ಜರಿ ಏರಿಕೆಯಾಗಿದೆ.
ಮುಂಬೈ ಷೇರುಪೇಟೆ ಸೂಚ್ಯಂಕ 1,300 ಅಂಕಗಳಷ್ಟು ಏರಿಕೆಯೊಂದಿಗೆ 80,193.47 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಸೂಚ್ಯಂಕ 346.30 ಅಂಕಗಳಷ್ಟು ಜಿಗಿತದೊಂದಿಗೆ 24,253.55 ಅಂಕಗಳ ಗಡಿ ತಲುಪಿದೆ.
ಎಲ್ಲಾ ಪ್ರಮುಖ 13 ಸೆಕ್ಟರ್ ಗಳ ಷೇರುಗಳ ಮೌಲ್ಯ ಏರಿಕೆ ಕಂಡಿದ್ದು, ಅದಾನಿ ಗ್ರೂಪ್ ನ ಅದಾನಿ ಎನರ್ಜಿ ಮತ್ತು ಅದಾನಿ ಗ್ರೀನ್ ಷೇರುಗಳ ಮೌಲ್ಯ ಜಿಗಿತ ಕಂಡಿದೆ. ಶನಿವಾರ (ನ.23) ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿತ್ತು. ಇದು ಷೇರುಪೇಟೆ ವಹಿವಾಟಿನ ಮೇಲೆ ಪರಿಣಾಮ ಬೀರಿರುವುದಾಗಿ ವರದಿ ತಿಳಿಸಿದೆ.
ಮಧ್ಯಾಹ್ನ 12ಗಂಟೆ ವೇಳೆಗೆ ಷೇರುಪೇಟೆ ಸಂವೇದಿ ಸೂಚ್ಯಂಕ 1,126.56 ಅಂಕಗಳಷ್ಟು ಏರಿಕೆಯೊಂದಿಗೆ 80,239.40 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.