ಮುಂಬಯಿ : ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 173 ಅಂಕಗಳ ಉತ್ತಮ ಮುನ್ನಡೆ ಕಂಡಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಮಧ್ಯಾಹ್ನ 11 ಗಂಟೆಯ ಹೊತ್ತಿಗೆ ತನ್ನ ಆರಂಭಿಕ ಗಳಿಕೆಯನ್ನೆಲ್ಲ ಬಿಟ್ಟುಕೊಟ್ಟು 58.60 ಅಂಕಗಳ ನಷ್ಟಕ್ಕೆ ಗುರಿಯಾಗಿ 28,231.32 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇದೇ ರೀತಿ ರಾಷ್ಟ್ರೀಯ ಶೇರುಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 23.15 ಅಂಕಗಳ ನಷ್ಟಕ್ಕೆ ಗುರಿಯಾಗಿ 8,745.90 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಶೇರುಗಳು ಶೇ.0.3ರಿಂದ ಶೇ.0.6ರ ವರೆಗಿನ ಗಳಿಕೆಯನ್ನು ದಾಖಲಿಸಿದವು. ಕುಸಿತಕ್ಕೆ ಗುರಿಯಾದ ಪ್ರತೀ ಒಂದು ಶೇರಿಗೆ ಎರಡಕ್ಕೂ ಹೆಚ್ಚು ಶೇರುಗಳು ಮುನ್ನಡೆ ಸಾಧಿಸುವಲ್ಲಿ ಸಫಲವಾದವು.
ಆದರೆ ವಹಿವಾಟು ಆರಂಭವಾಗಿ ಎರಡು ತಾಸು ಕಳೆಯುವ ಮುನ್ನವೇ ಸೆನ್ಸೆಕ್ಸ್ ಮತ್ತು ನಿಫ್ಟಿ ತಮ್ಮ ಆರಂಭಿಕ ಗಳಿಕೆಯನ್ನು ಪೂರ್ತಿಯಾಗಿ ಬಿಟ್ಟುಕೊಟ್ಟು ನಷ್ಟದತ್ತ ವಾಲಿದವು.
ಎಚ್ ಡಿ ಎಫ್ ಸಿ ಸಮೂಹದ ಕಂಪೆನಿಗಳು ಹಾಗೂ ತೈಲ ಕಂಪೆನಿಗಳ ಶೇರುಗಳು ಮಾರುಕಟ್ಟೆಗೆ ಬೆಂಬಲವಾಗಿ ನಿಂತರೂ ಇನ್‌ಫ್ರಾ ಶೇರುಗಳು ತೀವ್ರ ಒತ್ತಡಕ್ಕೆ ಗುರಿಯಾದವು.
ಏಶ್ಯನ್ ಶೇರು ಪೇಟೆಗಳ ಪೈಕಿ ಹಾಂಕಾಂಗ್‌ನ ಹ್ಯಾಂಗ್‌ಸೆಂಗ್ ಸೂಚ್ಯಂಕ ಶೇ.0.21ರ ಮುನ್ನಡೆಯನ್ನು ಕಂಡಿತು. ಶಾಂಘೈ ಕಾಂಪೋಸಿಟ್ ಸೂಚ್ಯಂಕ ಶೇ.0.38ರ ಏರಿಕೆಯನ್ನು ಸಾಧಿಸಿತು.