ಮುಂಬಯಿ : ಅಮೆರಿಕ – ಚೀನ ವಾಣಿಜ್ಯ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಭೀತಿಯಲ್ಲಿ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಕಂಡು ಬರುತ್ತಿರುವ ಕುಸಿತವನ್ನು ಅನುಸರಿಸಿ ಮುಂಬಯಿ ಶೇರು ಮಾರುಕಟ್ಟೆ ನಿರಂತರ ಆರನೇ ದಿನವಾಗಿ ಇಂದು ಬುಧವಾರದ ವಹಿವಾಟನ್ನು 487.50 ಅಂಕಗಳ ನಷ್ಟದೊಂದಿಗೆ 37,789.13 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 138.40 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 11,359.50 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಮುಂಬಯಿ ಶೇರು ಪೇಟೆಯಲ್ಲಿಂದು ಮುಂಚೂಣಿ ಶೇರುಗಳು ಭಾರೀ ಮಾರಾಟದ ಒತ್ತಡಕ್ಕೆ ಗುರಿಯಾದ ಕಾರಣ ಸೆನ್ಸೆಕ್ಸ್ ಕುಸಿಯಿತು. ಆರ್‌ಐಎಲ್, ಝೀ ಶೇರುಗಳು ಟಾಪ್ ಲೂಸರ್ ಎನಿಸಿಕೊಂಡವು.
ಇದೇ ರೀತಿ ಟಾಟಾ ಮೋಟರ್, ಬಜಾಜ್ ಫಿನ್ ಸರ್ವ್, ರಿಲಯನ್ಸ್ ಇಂಡಸ್ಟ್ರೀಸ್ ಶೇರುಗಳೂ ಕುಸಿದವು.
ಯುಪಿಎಲ್, ಜೆಎಸ್‌ಡಬ್ಲ್ಯು ಸ್ಟೀಲ್, ಟೈಟಾನ್ ಕಂಪೆನಿ, ಬಿಪಿಸಿಎಲ್ ಮತ್ತು ಕೋಲ್ ಇಂಡಿಯಾ ಶೇರುಗಳು ಗೇನರ್ ಎನಿಸಿಕೊಂಡವು. ಬಹುತೇಕ ಹೆಚ್ಚಿನೆಲ್ಲ ರಂಗದ ಶೇರುಗಳು ಇಂದು ಕೆಂಬಣ್ಣಕ್ಕೆ ತಿರುಗಿದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,636 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 671 ಶೇರುಗಳು ಮುನ್ನಡೆ ಸಾಧಿಸಿದವು; 1,816 ಶೇರುಗಳು ಹಿನ್ನಡೆಗೆ ಗುರಿಯಾದವು; 149 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.