ಮುಂಬಯಿ : ಹಣದುಬ್ಬರ ಮತ್ತು ಕೈಗಾರಿಕಾ ಉತ್ಪಾದನೆ ಅಂಕಿ ಅಂಶಗಳು ಇಂದು ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಎಚ್ಚರಿಕೆಯ ನಡೆ ತೋರಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 100ಕ್ಕೂ ಅಧಿಕ ಅಂಕಗಳ ಜಿಗಿತವನ್ನು ದಾಖಲಿಸಿದರೂ ಅನಂತರದಲ್ಲಿ ಮುಗ್ಗರಿಸುವ ಮೂಲಕ ನಿರಾಶೆ ಉಂಟುಮಾಡಿತು.
ಬೆಳಗ್ಗೆ 10.45ರ ಸುಮಾರಿಗೆ ಸೆನ್ಸೆಕ್ಸ್ 14.31 ಅಂಕಗಳ ನಷ್ಟದೊಂದಿಗೆ 38,808.80 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 8.90 ಅಂಕಗಳ ನಷ್ಟದೊದಿಗೆ 11,574.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದು ಬೆಳಗ್ಗೆಯ ವಹಿವಾಟಿನಲ್ಲಿ ಟಾಪ್ ಲೂಸರ್‌ಗಳಾಗಿ ದಾಖಲಾದ ಭಾರ್ತಿ ಏರ್‌ಟೆಲ್, ಟಾಟಾ ಮೋಟರ್, ಐಟಿಸಿ, ಎಲ್ ಆ್ಯಂಡ್ ಟಿ, ಎಚ್ ಡಿ ಎಫ್ ಸಿ ಬ್ಯಾಂಕ್, ಹೀರೋ ಮೋಟೋ ಕಾರ್ಪ್, ಬಜಾಜ್ ಫಿನಾನ್ಸ್, ಪವರ್‌ಗ್ರಿಡ್, ಎಕ್ಸಿಸ್ ಬ್ಯಾಂಕ್ ಶೇರು ಶೇ.1.46ರ ನಷ್ಟಕ್ಕೆ ಗುರಿಯಾದವು.
ಇದೇ ವೇಳೆ, ಸನ್ ಫಾರ್ಮಾ, ಎನ್‌ಟಿಪಿಸಿ, ಎಸ್ ಬ್ಯಾಂಕ್, ಆರ್‌ಐಎಲ್, ಟಾಟಾ ಸ್ಟೀಲ್, ಟೆಕ್ಕೆಮ್, ಎಚ್ ಡಿ ಎಫ್ ಸಿ ಶೇರುಗಳು ಶೇ.1.21ರ ಏರಿಕೆಯನ್ನು ಕಂಡವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 7 ಪೈಸೆಯ ಕುಸಿತವನ್ನು ಕಂಡು 68.51 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಅಂತಾರಾಷ್ಟ್ರೀಯ ಬ್ರೆಂಟ್ ಕಚ್ಚಾತೈಲ ಶೇ.0.65ರ ಏರಿಕೆಯನ್ನು ದಾಖಲಿಸಿ ಬ್ಯಾರಲ್ ಗೆ 66.95 ಡಾಲರ್ ಮಟ್ಟದಲ್ಲಿ ಬಿಕರಿಯಾಗುತ್ತಿತ್ತು.