ಮುಂಬಯಿ : ಐಟಿ, ಮೆಟಲ್ ಸೇರಿದಂತೆ ಮುಂಚೂಣಿ ಕ್ಷೇತ್ರಗಳ ಶೇರುಗಳು ಉತ್ತಮ ಖರೀದಿಯಾ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 200ಕ್ಕೂ ಅಧಿಕ ಅಂಕಗಳ ಜಿಗಿತವನ್ನು ದಾಖಲಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11,300 ಅಂಕಗಳ ಗಡಿಯನ್ನು ಪುನರ್ ಸಂಪಾದಿಸಿತು.
ನಿನ್ನೆ ಗುರುವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 279 ಅಂಕಗಳ ಜಿಗಿತವನ್ನು ಸಾಧಿಸಿತ್ತಾದರೆ ನಿಫ್ಟಿ 100ಕ್ಕೂ ಅಧಿಕ ಅಂಕಗಳ ಮುನ್ನಡೆಯನ್ನು ದಾಖಲಿಸಿತ್ತು.
ಬೆಳಗ್ಗೆ 10.40 ರ ಸುಮಾರಿಗೆ ಸೆನ್ಸೆಕ್ಸ್ 193.89 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 37,588.45 ಅಂಕಗಳ ಮಟ್ಟದಲ್ಲೂ ನಿಫ್ಟಿ 51.20 ಅಂಕಗಳ ಮುನ್ನಡೆಯೊಂದಿಗೆ 11,308.30 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದು ಬೆಳಗ್ಗೆಯ ವಹಿವಾಟಿನ ಟಾಪ್ ಗೇನರ್‌ಗಳಾಗಿ ಮೂಡಿ ಬಂದ ಎಸ್ ಬ್ಯಾಂಕ್, ಬಜಾಜ್ ಫಿನಾನ್ಸ್, ಕೋಲ್ ಇಂಡಿಯಾ, ಎಚ್ ಡಿ ಎಫ್ ಸಿ, ಮಹೀಂದ್ರ, ಇಂಡಸ್ ಇಂಡ್ ಬ್ಯಾಂಕ್, ಎಚ್ ಯು ಎಲ್, ಟಿಸಿಎಸ್ ಮತ್ತು ಮಾರುತಿ ಸುಜುಕಿ ಶೇರುಗಳು ಶೇ.0.91ರ ಏರಿಕೆಯನ್ನು ದಾಖಲಿಸಿದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 16 ಪೈಸೆಗಳ ಕುಸಿತವನ್ನು ಕಂಡು 70.20 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. ಬ್ರೆಂಟ್ ಕಚ್ಚಾ ತೈಲ ಧಾರಣೆ ಇಂದು ಶೇ.0.30 ಏರಿಕೆಯನ್ನು ಕಂಡು ಬ್ಯಾರಲ್ ಗೆ 72.84 ಡಾಲರ್ ಮಟ್ಟದಲ್ಲಿ ಬಿಕರಿಯಾಗುತ್ತಿತ್ತು.