ಮುಂಬಯಿ : ಮಾರ್ಚ್ ತ್ತೈಮಾಸಿಕಕ್ಕೆ ಶೇ.7.7ರ ಅತ್ಯುತ್ತಮ ಜಿಡಿಪಿ ದಾಖಲಾಗಿರುವ ಕಾರಣ ಮುಂಬಯಿ ಶೇರು ಪೇಟೆಯಲ್ಲಿ ಎರಡನೇ ದಿನವಾದ ಇಂದು ಶುಕ್ರವಾರ ಕೂಡ ತೇಜಿ ಕಂಡುಬಂದಿದ್ದು ದಿನದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 106 ಅಂಕಗಳ ಮುನ್ನಡೆಯನ್ನು ಸಾಧಿಸಿದೆ.
ಸುಧಾರಿತ ಜಿಡಿಪಿಯ ಕಾರಣ ವಹಿವಾಟುದಾರರು ಜೂನ್ ಸರಣಿಯ ವಹಿವಾಟನ್ನು ಚುರುಕುಗೊಳಿಸಿದ್ದು ಮುಂಚೂಣಿ ಶೇರುಗಳ ಖರೀದಿಯಲ್ಲಿ ತೊಡಗಿಕೊಂಡಿರುವುದರಿಂದ ಮುಂಬಯಿ ಶೇರು ಪೇಟೆಯಲ್ಲಿ ತೇಜಿ ಕಂಡು ಬಂದಿದೆ.
ನಿನ್ನೆ ಗುರುವಾರ 416.27 ಅಂಕಗಳ ಭರ್ಜರಿ ಏರಿಕೆಯನ್ನು ಸಾಧಿಸಿದ್ದ ಸೆನ್ಸೆಕ್ಸ್ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಬೆಳಗ್ಗೆ 10.15ರ ಸುಮಾರಿಗೆ 90.98 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 35,413.36 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 21.80 ಅಂಕಗಳ ಮುನ್ನಡೆಯೊಂದಿಗೆ 10,758.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಚ್ ಡಿ ಎಫ್ ಸಿ, ಐಸಿಐಸಿಐ ಬ್ಯಾಂಕ್, ಟೆಕ್ ಮಹೀಂದ್ರ, ಎಚ್ ಡಿ ಎಫ್ ಸಿ ಬ್ಯಾಂಕ್, ಟಾಟಾ ಸ್ಟೀಲ್ ಶೇರುಗಳು ಇಂದು ಹೆಚ್ಚು ಕ್ರಿಯಾಶೀಲವಾಗಿದ್ದವು.
ಟಾಪ್ ಲೂಸರ್‌ಗಳು : ಪವರ್ ಗ್ರಿಡ್, ಒಎನ್‌ಜಿಸಿ, ಅದಾನಿ ಪೋರ್ಟ್, ಗೇಲ್, ಎನ್‌ಟಿಪಿಸಿ. ಟಾಪ್ ಗೇನರ್‌ಗಳು : ವೇದಾಂತ, ಐಸಿಐಸಿಐ ಬ್ಯಾಂಕ್ , ಬಜಾಜ್ ಆಟೋ, ಐಡಿಯಾ ಸೆಲ್ಯುಲರ್, ಮಾರುತಿ ಸುಜುಕಿ.
ಡಾಲರ್ ಎದುರು ರೂಪಾಯಿ ಇಂದು 24 ಪೈಸೆಯಷ್ಟು ಚೇತರಿಕೆಯನ್ನು ಕಂಡುಕೊಂಡ 67.17 ರೂ. ಮಟ್ಟ ತಲುಪಿರುವುದು ಕೂಡ ಶೇರು ಮಾರುಕಟ್ಟೆಗೆ ಉತ್ಸಾಹವನ್ನು ತುಂಬಿತು.