ಮುಂಬಯಿ : ದೇಶೀಯ ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮೆಟಲ್, ಎನರ್ಜಿ ಮತ್ತು ಬ್ಯಾಂಕಿಂಗ್ ರಂಗದ ಶೇರುಗಳನ್ನು ಖರೀದಿಸಿದ ಕಾರಣ 33.13 ಅಂಕಗಳ ಮುನ್ನಡೆಯನ್ನು ಸಾಧಿಸಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 36,858.23 ಅಂಕಗಳ ಸಾರ್ವಕಾಲಿಕ ದಾಖಲೆಯ ಮಟ್ಟವನ್ನು ತಲುಪುವ ಮೂಲಕ ಕೊನೆಗೊಳಿಸಿತು.
ಜುಲೈ ವಾಯಿದೆ ವಹಿವಾಟು ತಿಂಗಳ ಕೊನೆಯ ಗುರುವಾರವಾಗಿರುವ ನಾಳೆ ಚುಕ್ತಾ ಮಾಡುವುದಕ್ಕೆ ಮುನ್ನವೇ ವಹಿವಾಟುದಾರರು ಶಾರ್ಟ್ ಕವರಿಂಗ್ ನಡೆಸಿದ ಕಾರಣ ಮುಂಬಯಿ ಶೇರು ಪೇಟೆಯಲ್ಲಿ ಇಂದು ತೇಜಿ ಕಂಡು ಬಂತು. ಇಂದಿನ ವಹಿವಾಟಿನ ನಡುವೆ ಸೆನ್ಸೆಕ್ಸ್ ಒಮ್ಮೆ 36,947.18 ಅಂಕಗಳ ದಾಖಲೆಯ ಎತ್ತರವನ್ನು ತಲುಪಿ ನಿನ್ನೆಯ 36,902.06 ಅಂಕಗಳ ದಾಖಲೆ ಎತ್ತರದ ಗೆರೆಯನ್ನು ದಾಟುವ ಸಾಧನೆ ಮಾಡಿತು.
ಕಳೆದ ಮೂರು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 473.87 ಅಂಕಗಳನ್ನು ಸಂಪಾದಿಸಿತ್ತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು ತನ್ನ ದಾಖಲೆಯ ಎತ್ತರದ ಮಟ್ಟದಿಂದ ಜಾರಿ 2.30 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 11,132.00 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ವಿದೇಶಿ ಹೂಡಿಕೆದಾರರು ನಿನ್ನೆ ಗುರುವಾರ 104.34 ಕೋಟಿ ರೂ. ಶೇರನ್ನು ಖರೀದಿಸಿದ್ದರು. ದೇಶೀಯ ಸಾಂಸ್ಥಿಕ ಹೂಡಿಕೆದಾರ ಸಂಸ್ಥೆಗಳು 513.78 ಕೋಟಿ ರೂ. ಶೇರುಗಳನ್ನು ಖರೀದಿಸಿದ್ದವು.