ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 200 ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11,800 ಅಂಕಗಳ ಮನೋಪ್ರಾಬಲ್ಯದ ಕೆಳ ಮಟ್ಟಕ್ಕೆ ಕುಸಿಯಿತು.
ಜಾಗತಿಕ ಶೇರು ಮಾರುಕಟ್ಟೆಗಳಲ್ಲಿನ ನಿರುತ್ಸಾಹವನ್ನು ಅನುಸರಿಸಿದ ಮುಂಬಯಿ ಶೇರು ಪೇಟೆಯಲ್ಲಿಂದು ಆರ್‌ಐಎಲ್, ಐಟಿಸಿ ಮತ್ತು ಎಚ್ ಡಿ ಎಫ್ ಸಿ ಶೇರುಗಳು ತೀವ್ರ ಮಾರಾಟ ಒತ್ತಡಕ್ಕೆ ಗುರಿಯಾದವು.
ಬೆಳಗ್ಗೆ 10.15ರ ಹೊತ್ತಿಗೆ ಸೆನ್ಸೆಕ್ಸ್ 218.17 ಅಂಕಗಳ ನಷ್ಟದೊಂದಿಗೆ 39,233.90 ಅಂಕಗಳ ಮಟ್ಟದಲ್ಲೂ ನಿಫ್ಟಿ 73.60 ಅಂಕಗಳ ನಷ್ಟದೊಂದಿಗೆ 11,749.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಕಳೆದ ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 289.29 ಅಂಕಗಳ ನಷ್ಟ ಅನುಭವಿಸಿತ್ತು; ನಿಫ್ಟಿ 90.75 ಅಂಕಗಳ ಕುಸಿತಕ್ಕೆ ಗುರಿಯಾಗಿತ್ತು.
ಇಂದು ಸೋಮವಾರದ ಬೆಳಗ್ಗಿನ ವಹಿವಾಟಿನಲ್ಲಿ ಟಾಪ್ ಲೂಸರ್ ಗಳೆನಿಸಿದ ವೇದಾಂತ, ಟಾಟಾ ಸ್ಟೀಲ್, ಆರ್‌ಐಎಲ್, ಕೋಲ್ ಇಂಡಿಯ, ಎಕ್ಸಿಸ್ ಬ್ಯಾಂಕ್, ಹೀರೋ ಮೋಟೋ ಕಾರ್ಪ್, ಟಾಟಾ ಮೋಟರ್ ಮತ್ತು ಕೋಟಕ್ ಬ್ಯಾಂಕ್ ಶೇರುಗಳು ಶೇ.2ರ ನಷ್ಟಕ್ಕೆ ಗುರಿಯಾದವು.
ಡಾಲರ್ ಎದುರು ರೂಪಾಯಿ ಇಂದು ಆರು ಪೈಸೆಗಳ ಇಳಿಕೆಯನ್ನು ಕಂಡು 69.86 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. ಅಂತಾರಾಷ್ಟ್ರೀಯ ಬ್ರೆಂಟ್ ಕಚ್ಚಾ ತೈಲ ಶೇ.0.31ರ ಏರಿಕೆಯನ್ನು ಕಂಡು ಬ್ಯಾರಲ್ ಗೆ 62.20 ಡಾಲರ್ ಮಟ್ಟದಲ್ಲಿ ಬಿಕರಿಯಾಗುತ್ತಿತ್ತು.