ಮುಂಬಯಿ: ಅಮೆರಿಕ – ಚೀನ ವಾಣಿಜ್ಯ ಬಿಕ್ಕಟ್ಟು ಹೆಚ್ಚುತ್ತಿರುವ ನಡುವೆಯೇ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಇಂದು ತಲ್ಲಣ ಕಂಡು ಬಂದಿದ್ದು ಇದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 250ಕ್ಕೂ ಅಧಿಕ ಅಂಕಗಳ ನಷ್ಟವನ್ನು ಅನುಭವಿಸಿತು.
ನಿರಂತರ ಆರನೇ ದಿನವೂ ನಷ್ಟದ ಹಾದಿಯಲ್ಲಿ ಸಾಗಿರುವ ಮುಂಬಯಿ ಶೇರು ಪೇಟೆಯಲ್ಲಿ ಇಂದು ಆರ್‌ಐಎಲ್, ಒಎನ್‌ಜಿಸಿ, ಬಜಾಜ್ ಆಟೋ, ಬಜಾಜ್ ಫಿನಾನ್ಸ್, ಅವಳಿ ಎಚ್ ಡಿ ಎಫ್ ಸಿ, ಎಚ್ ಯುಎಲ್ ಮತ್ತು ಎಸ್‌ಬಿಐ ಶೇರುಗಳು ಶೇ.1.57ರ ಕುಸಿತವನ್ನು ಕಂಡವು.
ಬೆಳಗ್ಗೆ 10.40ರ ಸುಮಾರಿಗೆ ಸೆನ್ಸೆಕ್ಸ್ 275.15 ಅಂಕಗಳ ನಷ್ಟದೊಂದಿಗೆ 38,001.48 ಅಂಕಗಳ ಮಟ್ಟದಲ್ಲೂ, ನಿಫ್ಟಿ 84.30 ಅಂಕಗಳ ನಷ್ಟದೊಂದಿಗೆ 11,413.60 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ 20 ಪೈಸೆಗಳ ಕುಸಿತವನ್ನು ಕಂಡು 69.62 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಬ್ರೆಂಟ್ ಅಂತಾರಾಷ್ಟ್ರೀಯ ಕಚ್ಚಾ ತೈಲ ಶೇ.0.44ರ ಕುಸಿತವನ್ನು ಕಂಡು ಬ್ಯಾರಲ್‌ಗೆ 70.19 ಡಾಲರ್ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.