ಮುಂಬಯಿ : ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕಿನ ಹೊಸ ಅಧ್ಯಕ್ಷ ಜೆರೋಮ್ ಪೊವೆಲ್ ಫೆಡ್ ರೇಟ್ ಏರುವ ಕುರಿತಾಗಿ ನೀಡಿರುವ ಹೇಳಿಕೆಯನ್ನು ಅನುಸರಿಸಿ ಹಣದುಬ್ಬರ ಭೀತಿ ಉಂಟಾಗಿರುವ ಪರಿಣಾಮವಾಗಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 162.35 ಅಂಕಗಳ ನಷ್ಟದೊಂದಿಗೆ 34,184.05 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಪಂಜಾಬ್ ನ್ಯಾಶನಲ್ ಬಾಂಕಿನ 2 ಬಿಲಿಯ ಡಾಲರ್‌ಗಳ ವಂಚನೆ ಹಗರಣವನ್ನು ಅನುಸರಿಸಿ ಎಲ್ಲ ಬ್ಯಾಂಕುಗಳು ತಮಗಿರುವ ತಾಂತ್ರಿಕ ಮತ್ತು ಕಾರ್ಯನಿರ್ವಹಣೆ ಅಪಾಯಗಳ ಬಗ್ಗೆ 15 ದಿನಗಳ ಒಳಗಾಗಿ ಕ್ರಮತೆಗೆದುಕೊಳ್ಳುವಂತೆ ಕೇಂದ್ರ ಹಣಕಾಸು ಸಚಿವಾಲಯ ಗಡುವು ನಿಗದಿಸಿರುವ ಹಿನ್ನೆಲೆಯಲ್ಲಿ ಎಕ್ಸಿಸ್ ಬ್ಯಾಂಕ್, ಎಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಎಚ್ ಡಿ ಎಫ್ ಸಿ ಬ್ಯಾಂಕ್ ಶೇರುಗಳು ತೀವ್ರ ಹೊಡೆತಕ್ಕೆ ಗುರಿಯಾದವು.
ಡಾಲರ್ ಎದುರು ರೂಪಾಯಿ ಮೂರು ತಿಂಗಳ ಕನಿಷ್ಠವಾಗಿ 65.31 ರೂ. ಮಟ್ಟದಲ್ಲಿ ಮುಂದುವರಿಯುತ್ತಿರುವುದು ಮತ್ತು ಇಂದು ರೂಪಾಯಿ 44 ಪೈಸೆಯಷ್ಟು ಕುಸಿದಿರುವುದು ಶೇರು ಮಾರುಕಟ್ಟೆಯ ಉತ್ಸಾಹವನ್ನು ಕುಂದಿಸಿದವು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 64.45 ಅಂಕಗಳ ನಷ್ಟದೊಂದಿಗೆ 10,492.85ರ ಮಟ್ಟಕ್ಕೆ ಇಳಿದು ದಿನದ ವಹಿವಾಟನ್ನು ಕೊನೆಗೊಳಿಸಿತು. ಸೆನ್ಸೆಕ್ಸ್ ನಿನ್ನೆಯ ದಿನ 99.36 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ಇಂದಿನ ವಹಿವಾಟಿನಲ್ಲಿ ಮೆಟಲ್, ಬ್ಯಾಂಕಿಂಗ್, ಎಫ್ಎಂಸಿಜಿ, ಕ್ಯಾಪಿಟಲ್ ಗೂಡ್ಸ್, ಪವರ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಶೇರುಗಳು ಶೇ.1.21ರಷ್ಟು ಹಿನ್ನಡೆಗೆ ಗುರಿಯಾದವು.