ಮುಂಬಯಿ: ಜಾಗತಿಕ ಆರ್ಥಿಕ ನಿಧಾನಗತಿಯ ಭೀತಿ ಎಲ್ಲೆಡೆಯ ಶೇರು ಮಾರುಕಟ್ಟೆಗಳಲ್ಲಿ ಕಂಡು ಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 24 ಅಂಕಗಳ ನಷ್ಟಕ್ಕೆ ಗುರಿಯಾಯಿತು. ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಹಿನ್ನಡೆಯನ್ನು ಕಂಡಿತು.
ಬೆಳಗ್ಗೆ 10.50ರ ಸುಮಾರಿಗೆ ಸೆನ್ಸೆಕ್ಸ್ 105.30 ಅಂಕಗಳ ನಷ್ಟದೊಂದಿಗೆ 39,581.20 ಅಂಕಗಳ ಮಟ್ಟದಲ್ಲೂ ನಿಫ್ಟಿ 27.50 ಅಂಕಗಳ ನಷ್ಟದೊಂದಿಗೆ 11,838.10 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಒಎನ್‌ಜಿಸಿ, ಇಂಡಸ್ ಇಂಡ್ ಬ್ಯಾಂಕ್, ಎನ್‌ಟಿಪಿಸಿ, ಆರ್‌ಐಎಲ್, ಎಲ್ ಆ್ಯಂಡ್ ಟಿ, ಎಚ್ ಡಿ ಎಫ್ ಸಿ, ಭಾರ್ತಿ ಏರ್‌ಟೆಲ್, ಮಾರುತಿ ಮತ್ತು ಎಸ್‌ಬಿಐ ಶೇರುಗಳು ಶೇ.1.15ರ ಏರಿಕೆಯನ್ನು ದಾಖಲಿಸಿದವು.
ಎಸ್ ಬ್ಯಾಂಕ್ ಶೇರು ಇಂದು ಶೇ.6ರ ಕುಸಿತವನ್ನು ಕಂಡು ಟಾಪ್ ಲೂಸರ್ ಪಟ್ಟಿಯಲ್ಲಿ ಅಗ್ರ ಸ್ಥಾನಿಯಾಯಿತು. ಇದನ್ನು ಅನುಸರಿಸಿ ಟಾಟಾ ಮೋಟರ್, Hero ಮೋಟೋ ಕಾರ್ಪ್, ಸನ್ ಫಾರ್ಮಾ, ಟೆಕ್ಕೆಂ, ಬಜಾಜ್ ಆಟೋ ಮತ್ತು ಮಹೀಂದ್ರ ಶೇರುಗಳು ಶೇ.1.76ರ ಕುಸಿತವನ್ನು ಕಂಡವು.
ಡಾಲರ್ ಎದುರು ರೂಪಾಯಿ ಇಂದು 9 ಪೈಸೆಗಳ ಕುಸಿತವನ್ನು ಕಂಡು 69.03 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. ಬ್ರೆಂಟ್ ಅಂತಾರಾಷ್ಟ್ರೀಯ ಕಚ್ಚಾ ತೈಲ ಶೇ. 0.20 ಇಳಿಕೆಯನ್ನು ಕಂಡು ಬ್ಯಾರಲ್ ಗೆ 64.93 ಡಾಲರ್ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.