ಮುಂಬಯಿ : ಆರ್‌ಬಿಐ ನಿರಂತರ 3ನೇ ಬಾರಿಗೆ ಇಂದು ಗುರವಾರ ಶೇ.0.25 ರಿಪೋ ದರ ಕಡಿತ ಮಾಡಿದ ಹೊರತಾಗಿಯೂ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 554 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 39,529.72 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 177.90 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು11,843.75 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಆರ್‌ಬಿಐ ಇಂದು ಪ್ರಕಟಿಸಿದ ತನ್ನ ಹಣಕಾಸು ನೀತಿಯಲ್ಲಿ ದೇಶದ ಆರ್ಥಿಕ ಪ್ರಗತಿಯ ಅಂದಾಜನ್ನು ಹಾಲಿ ಹಣಕಾಸು ವರ್ಷದಲ್ಲಿ ಶೇ.7ಕ್ಕೆ ಇಳಿಸಿರುವುದು ಮುಂಬಯಿ ಶೇರು ಪೇಟೆಯ ಉತ್ಸಾಹಕ್ಕೆ ತಣ್ಣೀರೆರಚಿತು. ಅಂತೆಯೇ ಹಣಕಾಸು ರಂಗದ ಶೇರುಗಳು ತೀವ್ರ ಹೊಡೆತಕ್ಕೆ ಗುರಿಯಾದವು.
ಇಂದಿನ ಟಾಪ್ ಲೂಸರ್‌ಗಳ ಪೈಕಿ ಇಂಡಸ್ ಇಂಡ್ ಬ್ಯಾಂಕ್, ಎಸ್ ಬ್ಯಾಂಕ್, ಎಸ್‌ಬಿಐ, ಎಲ್ ಆ್ಯಂಡ್ ಟಿ, ಟಾಟಾ ಸ್ಟೀಲ್, ಮಹೀಂದ್ರ, ಬಜಾಜ್ ಫಿನಾನ್ಸ್, ವೇದಾಂತ, ಟಾಟಾ ಮೋಟರ್ ಮತ್ತು ಆರ್‌ಐಎಲ್ ಶೇರುಗಳು ಶೇ.6.97ರ ಕುಸಿತವನ್ನು ಕಂಡವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,731 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 740 ಶೇರುಗಳು ಮುನ್ನಡೆ ಸಾಧಿಸಿದವು; 1,859 ಶೇರುಗಳು ಹಿನ್ನಡೆಗೆ ಗುರಿಯಾದವು; 132 ಶೇರುಗಳ ಧಾರಣೆ,ಯಾವುದೇ ಬದಲಾವಣೆ ಕಾಣಲಿಲ್ಲ.