ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟಿನ ಕೊನೇ ತಾಸಿನಲ್ಲಿ ಹಠಾತ್ ಕುಸಿತ ಕಂಡ ಪರಿಣಾಮವಾಗಿ ದಿನದ ವಹಿವಾಟನ್ನು 345.56 ಅಂಕಗಳ ನಷ್ಟದೊಂದಿಗೆ 34,812.99 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 103 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 10,482.20 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಡಾಲರ್ ಎದುರು ರೂಪಾಯಿ ಕುಸಿತ ಮತ್ತು ತೈಲ ಬೆಲೆ ಮತ್ತೆ ಏರುವ ಭೀತಿಗೆ ಮುಂಬಯಿ ಶೇರು ಪೇಟೆ ನಲುಗಿತು. ಬ್ರೆಂಟ್ ಕಚ್ಚಾ ತೈಲು ನಿರಂತರ ನಾಲ್ಕು ದಿನಗಳ ಕುಸಿತದ ಬಳಿಕ ಇಂದು ಮತ್ತೆ ಧಿಗ್ಗನೆ ಎದ್ದು ಬ್ಯಾರಲ್‌ಗೆ ಶೇ.2.09ರ ಏರಿಕೆಯನ್ನು ಕಂಡು 71.62 ರೂ.ಗೆ ತಲುಪಿತು.
ಡಾಲರ್ ಎದುರು ರೂಪಾಯಿ ಇಂದು 57 ಪೈಸೆಗಳ ಕುಸಿತವನ್ನು ಕಂಡು 73.07 ರೂ.ಗೆ ಕುಸಿದದ್ದು ಶೇರು ಮಾರುಕಟ್ಟೆಯ ಆತಂಕ ಹೆಚ್ಚಲು ಕಾರಣವಾಯಿತು.
ಕಳೆದ ಶುಕ್ರವಾರ 79.13 ಅಂಕಗಳ ನಷ್ಟಕ್ಕೆ ಗುರಿಯಾಗಿದ್ದ ಸೆನ್ಸೆಕ್ಸ್ ಇಂದಿನ ವಹಿವಾಟಿನ ನಡುವೆ 576 ಅಂಕಗಳ ಓಲಾಟವನ್ನು ಕಂಡು ಅಂತಿಮವಾಗಿ 345.56 ಅಂಕಗಳ ನಷ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,762 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,039 ಶೇರುಗಳು ಮುನ್ನಡೆ ಕಂಡವು; 1,530 ಶೇರುಗಳು ಹಿನ್ನಡೆಗೆ ಗುರಿಯಾದವು; 193 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.