ಮುಂಬಯಿ: ಇದೇ ಮೊದಲ ಬಾರಿಗೆ ಮುಂಬೈ ಷೇರುಪೇಟೆ 49 ಸಾವಿರದ ಗಡಿ ದಾಟುವ ಮೂಲಕ ದಾಖಲೆ ಬರೆದಿದೆ. ಸೋಮವಾರದ ವಹಿವಾಟಿನ ವೇಳೆ ಮಧ್ಯಾಂತರದ ಒಂದು ಹಂತದಲ್ಲಿ 49,303.79ಕ್ಕೆ ತಲುಪಿದ್ದ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ, ದಿನಾಂತ್ಯಕ್ಕೆ 49,269.32ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಬಿಎಸ್‌ಇ ಸೆನ್ಸೆಕ್ಸ್ 486.81 ಅಂಕಗಳ ಏರಿಕೆ ಕಂಡಿದೆ.
ನಿಫ್ಟಿ ಕೂಡ 137.50 ಅಂಕಗಳಷ್ಟು ಏರಿಕೆಯಾಗಿ, 14,484.75ರಲ್ಲಿ ಕೊನೆಗೊಳ್ಳುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ. ಮಧ್ಯಾಂತರದಲ್ಲಿ ಇದು ಕೂಡ ದಾಖಲೆಯ 14,498ಕ್ಕೇರಿ ವಾಪಸಾಗಿದೆ.
ಐಟಿ ಷೇರುಗಳಿಗೆ ಲಾಭ: ಕಳೆದ ಶುಕ್ರವಾರ ಐಟಿ ಕಂಪೆನಿ ಟಿಸಿಎಸ್ ತನ್ನ ಡಿಸೆಂಬರ್‌ಗೆ ಪೂರ್ಣಗೊಂಡ ತ್ತೈಮಾಸಿಕದಲ್ಲಿ ನಿವ್ವಳ ಲಾಭ ಶೇ.7.2 ಏರಿಕೆ ಯಾಗಿರುವುದಾಗಿ ಘೋಷಿಸಿತ್ತು. ಅಲ್ಲದೆ, 22ನೇ ವಿತ್ತ ವರ್ಷದಲ್ಲಿ ಆದಾಯದ ಪ್ರಗತಿಯಲ್ಲಿ ಎರಡಂಕಿ ಬೆಳವಣಿಗೆ ಸಾಧಿಸುವ ನಿರೀಕ್ಷೆಯನ್ನೂ ಹೊರಹಾಕಿತ್ತು. ಕಂಪೆನಿಯ ಈ ಘೋಷಣೆಯು ಷೇರುಪೇಟೆಯಲ್ಲಿ ಸಂಚಲನ ಮೂಡಿಸಿದ್ದು, ಹೂಡಿಕೆದಾರರು ಷೇರುಗಳ ಖರೀದಿಯಲ್ಲಿ ಭಾರೀ ಆಸಕ್ತಿ ತೋರಿದರು. ಪರಿಣಾಮ ಎಚ್‌ಸಿಎಲ್ ಟೆಕ್, ಇನ್ಫೋಸಿಸ್, ಎಚ್‌ಡಿಎಫ್ಸಿ, ಮಾರುತಿ, ಟೆಕ್ ಮಹೀಂದ್ರಾ, ಬಜಾಜ್ ಆಟೋ ಮತ್ತು ಎಂ ಆ್ಯಂಡ್ ಎಂ ಕಂಪೆನಿಗಳ ಷೇರುಗಳು ಭಾರೀ ಲಾಭ ಗಳಿಸಿದವು.
ಇನ್ನು ಬಜಾಜ್ ಫಿನ್‌ಸರ್ವ್, ಬಜಾಜ್ ಫೈನಾನ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಎಲ್ ಆ್ಯಂಡ್ ಟಿ, ಕೋಟಕ್ ಬ್ಯಾಂಕ್ ಮತ್ತು ಎಸ್‌ಬಿಐ ನಷ್ಟ ಅನುಭವಿಸಿದವು.
ಏರಿಕೆಗೆ ಕಾರಣ?: ಟಿಸಿಎಸ್ ಮತ್ತು ಡಿಮಾರ್ಟ್‌ನ ಆದಾಯ ಗಳಿಕೆಯಲ್ಲಿನ ಹೆಚ್ಚಳ, ಕೊರೊನಾ ಗುಣಮುಖರ ಸಂಖ್ಯೆ ಹೆಚ್ಚಳ, ಇದೇ 16ರಿಂದ ಕೊರೊನಾ ಲಸಿಕೆ ವಿತರಣೆ ಆರಂಭ ಮತ್ತಿತರ ಬೆಳವಣಿಗೆಗಳು ಷೇರುಪೇಟೆಯ ದಾಖಲೆಗೆ ಕಾರಣವಾದವು.
ಚಿನ್ನದ ದರ 389 ರೂ. ಏರಿಕೆ: ದಿಚಿನಿವಾರ ಪೇಟೆಯಲ್ಲಿ ಚಿನ್ನದ ದರ ಸೋಮವಾರ 389 ರೂ. ಏರಿಕೆಯಾಗಿ 10 ಗ್ರಾಂಗೆ 48,866 ರೂ. ಆಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆ, ಜಾಗತಿಕ ಚಿನ್ನದ ದರ ಏರಿಕೆಯೇ ಇದಕ್ಕೆ ಕಾರಣ. ಬೆಳ್ಳಿ ದರ 1,137 ರೂ. ಹೆಚ್ಚಳ ಕಂಡು, ಕೆಜಿಗೆ 64,726 ರೂ. ಆಗಿದೆ. ಇದೇ ವೇಳೆ, ಡಾಲರ್ ಎದುರು ರೂಪಾಯಿ ಮೌಲ್ಯ 16 ಪೈಸೆ ಕುಸಿತವಾಗಿ, 73.40 ರೂ.ಗೆ ತಲುಪಿದೆ.