ಮುಂಬಯಿ : ಚೀನದ ಉತ್ಪನ್ನಗಳ ಮೇಲೆ ಈ ವಾರ ತಾನು ಆಮದು ಸುಂಕ ಏರಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿರುವುದನ್ನು ಅನುಸರಿಸಿ ಚೀನ ಸಹಿತ ಏಶ್ಯನ್ ಶೇರು ಮಾರಕಟ್ಟೆಗಳಲ್ಲಿ ತೀವ್ರ ಕುಸಿತ ಕಂಡು ಬಂದಿದ್ದು ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 400ಕ್ಕೂ ಅಧಿಕ ಅಂಕಗಳ ಭಾರೀ ನಷ್ಟಕ್ಕೆ ಗುರಿಯಾಯಿತು.
ಚೀನದಿಂದ ಅಮೆರಿಕ ಆಮದಿಸಿಕೊಳ್ಳುತ್ತಿರುವ 200 ಶತಕೋಟಿ ಡಾಲರ್ ಭಾರೀ ಮೌಲ್ಯದ ಚೀನೀ ಉತ್ಪನ್ನಗಳ ಮೇಲಿನ ಸುಂಕವನ್ನು ತಾನು ಈಗಿನ ಶೇ.10ರಿಂದ ಶೇ.25ಕ್ಕೆ ಏರಿಸುವುದಾಗಿ ಟ್ರಂಪ್ ಕಳೆದ ಶುಕ್ರವಾರ ಹಾಕಿದ್ದ ಬೆದರಿಕೆಗೆ ಇಂದು ಏಶ್ಯನ್ ಶೇರು ಮಾರುಕಟ್ಟೆಗಳು ನಲುಗಿದವು.
ಚೀನದ ಶಾಂಘೈ ಕಾಂಪೋಸಿಟ್ ಇಂಡೆಕ್ಸ್ ಇಂದು ಶೇ.5ರಷ್ಟು ಕುಸಿದರೆ ಟೋಕಿಯೋ ಮತ್ತು ಸೋಲ್ ಶೇರು ಮಾರುಕಟ್ಟೆಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ 453 ಅಂಕಗಳ ನಷ್ಟಕ್ಕೆ ಗುರಿಯಾದವು.
ಇಂದು ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 303.25 ಅಂಕಗಳ ನಷ್ಟದೊಂದಿಗೆ 38,660.01 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 92.50 ಅಂಕಗಳ ನಷ್ಟದೊಂದಿಗೆ 11,619.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಬೆಳಗ್ಗಿನ ವಹಿವಾಟಿನ ಟಾಪ್ ಲೂಸರ್‌ಗಳಾದ ಟಾಟಾ ಮೋಟರ್, ಟಾಟಾ ಸ್ಟೀಲ್, ಎಸ್ ಬ್ಯಾಂಕ್, ವೇದಾಂತ, ಎಚ್ ಡಿ ಎಫ್ ಸಿ ಬ್ಯಾಂಕ್, ಒಎನ್‌ಜಿಸಿ, ಬಜಾಜ್ ಫಿನಾನ್ಸ್, ಇನ್‌ಫೋಸಿಸ್ ಮತ್ತು ಆರ್‌ಐಎಲ್ ಶೇರುಗಳು ಶೇ.4.65 ರ ಕುಸಿತಕ್ಕೆ ಗುರಿಯಾದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ ರೂಪಾಯಿ 24 ಪೈಸೆಗಳ ಕುಸಿತವನ್ನು ಕಂಡು 69.46 ರೂ. ಮಟ್ಟಕ್ಕೆ ಇಳಿಯಿತು.