ಮುಂಬಯಿ : ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಳಿದಿರುವುದು ಮತ್ತು ಡಾಲರ್ ಎದುರು ರೂಪಾಯಿ ನಿರಂತರ ಚೇತರಿಕೆಯನ್ನು ಕಾಣುತ್ತಿರುವುದು ಮುಂಬಯಿ ಶೇರು ಪೇಟೆಗೆ ಹೊಸ ಟಾನಿಕ್ ಆಗಿ ಪರಿಣಮಿಸಿರುವ ಕಾರಣ ಇಂದು ಸೋಮವಾರದ ವಹಿವಾಟನ್ನು ಸೆನ್ಸೆಕ್ಸ್ 240.61 ಅಂಕಗಳ ಚೇತೋಹಾರಿ ಮುನ್ನಡೆಯೊಂದಿಗೆ 35,165.48 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 83.50 ಅಂಕಗಳ ಮುನ್ನಡೆಯನ್ನು ಕಂಡು ದಿನದ ವಹಿವಾಟನ್ನು 10,688.65 ಅಂಕಗಳ ಮಟ್ಟದಲ್ಲಿ ಹೊಸ ಭರವಸೆಯೊಂದಿಗೆ ಕೊನೆಗೊಳಿಸಿತು.
ಕಳೆದ ಎರಡು ದಿನಗಳ ನಿರಂತರ ವಹಿವಾಟಿನಲ್ಲಿ ಸೆನ್ಸೆಕ್ಸ್ 579.96 ಅಂಕಗಳನ್ನು ಸಂಪಾದಿಸಿತ್ತು. ಇಂದಿನ ವಹಿವಾಟಿನಲ್ಲಿ ಕ್ಯಾಪಿಟಲ್ ಗೂಡ್ಸ್, ಆಯಿಲ್ ಆ್ಯಂಡ್ ಗ್ಯಾಸ್, PSU ಮತ್ತು ಹೆಲ್ತ್ ಕೇರ್ ಶೇರುಗಳು ವಿಜೃಂಭಿಸಿದವು.
ಕಳೆದ ಶುಕ್ರವಾರ ಬ್ರೆಂಟ್ ಕಚ್ಚಾತೈಲ ಶೇ.3ರಷ್ಟು ಮತ್ತು ಡಬ್ಲ್ಯುಟಿಐ ಶೇ.4ರಷ್ಟು ಕುಸಿದಿತ್ತು. ಇದರಿಂದಾಗಿ ಡಾಲರ್ ಎದುರು ರೂಪಾಯಿ ಸುಧಾರಣೆ ಕಂಡಿತ್ತು.
ಕಳೆದ ಶುಕ್ರವಾರ ದೇಶೀಯ ಹೂಡಿಕೆದಾರ ಸಂಸ್ಥೆಗಳು 887.76 ಕೋಟಿ ರೂ ಮೌಲ್ಯದ ಶೇರುಗಳನ್ನು ಖರೀದಿಸಿದ್ದರು; ವ್ಯತಿರಿಕ್ತವಾಗಿ ವಿದೇಶಿ ಹೂಡಿಕೆದಾರರು 768.29 ಕೋಟಿ ರೂ. ಮೌಲ್ಯದ ಶೇರುಗಳನ್ನು ಮಾರಿದ್ದರು.