ಮುಂಬಯಿ : ವಿದೇಶಿ ಹೂಡಿಕೆದಾರರು ಮತ್ತು ಹೈ ನೆಟ್ ವರ್ತ್ ವ್ಯಕ್ತಿಗಳ ಮೇಲೆ 2019ರ ಬಜೆಟ್ ನಲ್ಲಿ ಹೇರಲಾಗಿರುವ ಭಾರೀ ಪ್ರಮಾಣದ ತೆರಿಗೆ ಉಪಕ್ರಮದಿಂದ ನಿರಾಶಗೊಂಡಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ನಿರಂತರ ಮೂರನೇ ದಿನವಾಗಿ ಇಂದು ಮಂಗಳವಾರದ ವಹಿವಾಟಿನಲ್ಲಿ 250ಕ್ಕೂ ಅಧಿಕ ಅಂಕಗಳ ನಷ್ಟವನ್ನು ಅನುಭವಿಸಿತು.
ನಿನ್ನೆ ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 793 ಅಂಕಗಳನ್ನೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 253 ಅಂಕಗಳನ್ನೂ ಕಳೆದುಕೊಂಡಿದ್ದವು.
ಇಂದು ಮಂಗಳವಾರ ಬೆಳಗ್ಗೆ 10.30ರ ಸುಮಾರಿಗೆ ಸೆನ್ಸೆಕ್ಸ್ 211.24 ಅಂಕಗಳ ನಷ್ಟದೊಂದಿಗೆ 38,509.33 ಅಂಕಗಳ ಮಟ್ಟದಲ್ಲೂ ನಿಫ್ಟಿ 83.00 ಅಂಕಗಳ ನಷ್ಟದೊಂದಿಗೆ 11,475.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದು ಬೆಳಗ್ಗಿನ ವಹಿವಾಟಿನಲ್ಲಿ ಟಾಪ್ ಲೂಸರ್‌ಗಳಾದ ಅವಳಿ ಎಚ್ ಡಿ ಎಫ್ ಸಿ, ಏಶ್ಯನ್ ಪೇಂಟ್ಸ್, ಕೋಟಕ್ ಬ್ಯಾಂಕ್, ಎಚ್ ಯು ಎಲ್, ಬಜಾಜ್ ಫಿನಾನ್ಸ್ ಮತ್ತು ಎಕ್ಸಿಸ್ ಬ್ಯಾಂಕ್ ಶೇರುಗಳು ಶೇ.2.19ರ ನಷ್ಟಕ್ಕೆ ಗುರಿಯಾದವು.
ಇದೇ ವೇಳೆ ಎಸ್ ಬ್ಯಾಂಕ್, ಪವರ್ ಗ್ರಿಡ್, ಸನ್ ಫಾರ್ಮಾ, ಎನ್‌ಟಿಸಿಪಿ, ಲಾರ್ಸನ್, ಆರ್‌ಐಎಲ್, ವೇದಾಂತ ಶೇರುಗಳು ಶೇ.2.90 ಏರಿಕೆಯನ್ನು ಕಂಡವು.
ಡಾಲರ್ ಎದುರು ರೂಪಾಯಿ ಇಂದು 17 ಪೈಸೆಗಳ ಇಳಿಕೆಯನ್ನು ದಾಖಲಿಸಿ ಡಾಲರ್‌ಗೆ 68.83 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಬ್ರೆಂಟ್ ಅಂತಾರಾಷ್ಟ್ರೀಯ ಕಚ್ಚಾತೈಲ ಇಂದು ಶೇ.0.22ರ ಇಳಿಕೆಯನ್ನು ದಾಖಲಿಸಿ ಬ್ಯಾರಲ್ ಗೆ 63.97 ಡಾಲರ್ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.